ಬೆಳಗಾವಿ: ತಗ್ಗು-ಗುಂಡಿಗಳಿಂದ ಜನರಿಗಾಗುತ್ತಿರುವ ತೊಂದರೆ ಬಗ್ಗೆ ಪತ್ರಕರ್ತರು ಸುದ್ದಿ ಬರೆದು ಬರೆದು ಬೇಸತ್ತು ಕೊನೆಗೆ ತಾವೇ ಆ ತಗ್ಗು ಗುಂಡಿ ಮುಚ್ಚುವುದರ ಮೂಲಕ ಮಾದರಿ ಕಾರ್ಯ ಮಾಡಿದರು.
ಬೆಳಗಾವಿ ಪತ್ರಕರ್ತರ ಸಂಘವು ಈ ರೀತಿಯ ವಿನೂತನ ಕಾರ್ಯಕ್ರಮದ ಮೂಲಕ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಮಾಡಿತು. ನಗರದೊಳಗಿನ ರಸ್ತೆಗಳ ದುಸ್ಥಿತಿ ಬಿಡಿ. ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಹೊಂದಿಕೊಂಡ ರಸ್ತೆಯಲ್ಲಿಯೇ ದೊಡ್ಡ ದೊಡ್ಡ ತಗ್ಗು ಬಿದ್ದಿದ್ದವು. ಈ ಬಗ್ಗೆ ಮಾಧ್ಯಮದಲ್ಲಿ ವರದಿ ಕೂಡ ಆಯಿತು. ಆದರೆ ಜಿಲ್ಲಾಡಳಿತ ದುರಸ್ತಿ ಗೋಜಿಗೆ ಹೋಗಲೆ ಇಲ್ಲ. ಇದರಿಂದ ಬೇಸತ್ತ ಬೆಳಗಾವಿ ಪತ್ರಕರ್ತರ ಸಂಘವು ರಸ್ತೆಗಳಲ್ಲಿ ಬಿದ್ದಿದ್ದ ತಗ್ಗು ಮುಚ್ಚುವ ಕೆಲಸಕ್ಕೆ ಕೈ ಹಾಕಿತು.
ಆರಂಭದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಯೇ ಬಿದ್ದ ತಗ್ಗು ಮುಚ್ಚುವ ಕೆಲಸಕ್ಕೆ ಪತ್ರಕರ್ತರು ಚಾಲನೆ ನೀಡಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪತ್ರಕರ್ತರು ಈ ಕೆಲಸ ಮಾಡಿದ್ದು ವಿಶೇಷವಾಗಿತ್ತು.
೨ ತಿಂಗಳು ಬೇಕು ಅಂದ್ರು ಡಿಸಿ..!
ಈ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲರು ಈ ಕೆಲಸಕ್ಕೆ ಸ್ಪಷ್ಟೀಕರಣ ಸಹ ನೀಡಿದರು. ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಇನ್ನೂ ಎರಡ್ಮೂರು ತಿಂಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಂದರೆ ಜಿಲ್ಲಾದಿಕಾರಿಗಳ ಪ್ರಕಾರ ಇನ್ನೂ ಕನಿಷ್ಠ ಎರಡು ತಿಂಗಳುಗಳ ಕಾಲ ಬೆಳಗಾವಿ ಜನ ಇಂತಹ ಹದಗೆಟ್ಟ ರಸ್ತೆಯಲ್ಲಿ ಬಿದ್ದು ಸೊಂಟ ಮುರಿದುಕೊಳ್ಳಬೇಕು ಎನ್ನುವ ಹಾಗಾಗಿದೆ.
ಬೆಳಗಾವಿ ಡಿಸಿ ಕಚೇರಿ ಎದರೆ ಬಿದ್ದಿರುವ ತೆಗ್ಗುಗಳನ್ನು ಬೆಳಗಾವಿ ಪತ್ರಕರ್ತರು ಶ್ರಮದಾನದ ಮೂಲಕ ಮುಚ್ಚುವ ಕೆಲಸ ಮಾಡಿದರು.