ಬೆಂಗಳೂರು: ಗಂಡ ಚಾಕೊಲೇಟ್ ತಂದು ಕೊಡಲಿಲ್ಲ ಎಂದು ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಂದಿನಿ(24) ಎಂಬಾಕೆಯೇ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಾಕೆ. ಸೊಣ್ಣಪ್ಪ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಆರು ವರ್ಷದ ಹಿಂದೆ ಗೌತಮ್ ಜೊತೆ ನಂದಿನಿ ಲವ್ ಮ್ಯಾರೇಜ್ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ಪತಿ ಗೌತಮ್ ಸೆಲೂನ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಬೆಳಗ್ಗೆ ಗೌತಮ್ ಕೆಲಸಕ್ಕೆ ಹೊರಟಿದ್ದಾಗ ನಂದಿನಿ ಚಾಕೊಲೇಟ್ ತಂದು ಕೊಡು ಎಂದು ಕೇಳಿದ್ದಾಳೆ. ಆದರೆ ಕೆಲಸವಿದ್ದ ಕಾರಣ ಮಧ್ಯಾಹ್ನವಾದರು ಚಾಕೊಲೇಟ್ ತಂದು ಕೊಟ್ಟಿರಲಿಲ್ಲ. ಇದಾದ ಬಳಿಕ ಗೌತಮ್ ಮಧ್ಯಾಹ್ನ ನಂದಿನಿಗೆ ಕರೆ ಮಾಡಿದಾಗ ಸ್ವಿಕರಿಸಿಲ್ಲ. ಇದರಿಂದ ಅನುಮಾನಗೊಂಡ ಗೌತಮ್ ಮನೆಗೆ ಬಂದು ನೋಡಿದಾಗ ನಂದಿನಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತನ್ನ ಹೆಂಡತಿಯ ಶವವನ್ನು ನೋಡಿದ ಗಂಡ ಆಘಾತಕ್ಕೆ ಒಳಗಾಗಿದ್ದು, ಆಕೆಯನ್ನು ಎಬ್ಬಿಸುವ ಪ್ರಯತ್ನ ಮಾಡಿದರೂ ಆಕೆ ಸ್ಪಂದಿಸದೇ ಇದ್ದಾಗ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ಸಹ ಅಷ್ಟರಲ್ಲಾಗಲೇ ನಂದಿನಿ ಮೃತಪಟ್ಟಿದ್ದಾಳೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹೆಣ್ಣೂರು ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.