ಪಠ್ಯದಲ್ಲಿ ಭಗವದ್ಗೀತೆ ಪಾಠ : ಸ್ವರ್ಣವಲ್ಲೀ ಸ್ವಾಮೀಜಿ ವಿಶ್ವಾಸ

Advertisement

ದಾವಣಗೆರೆ: ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯ ಪಾಠವನ್ನು ಅಳವಡಿಸಬೇಕು ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತೊಮ್ಮ ಸರ್ಕಾರವನ್ನು ಆಗ್ರಹಿಸಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಮಂದಿರದ ಆವರಣದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದ ರಾಜ್ಯಮಟ್ಟದ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಕಳೆದ 15 ವರ್ಷಗಳಿಂದ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನ ಪ್ರಾರಂಭವಾದ ಹಿನ್ನೆಲೆಯಲ್ಲಿ ಸರ್ಕಾರವು ಶಾಲೆಯಲ್ಲಿ ನಡೆಸುವ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಗವದ್ಗೀತೆ ಪಠಣಕ್ಕೆ ಅವಕಾಶ ಮಾಡಿಕೊಟ್ಟಿತು. ಶಾಲೆಯಲ್ಲಿ ಪ್ರತಿದಿನ ಭಗವದ್ಗೀತೆಯ ಪಠಣ ಪದ್ಧತಿ ಆರಂಭವಾಯಿತು. ಈಗ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಪ್ರಾರಂಭವಾಗಿದೆ. ಇದೆಲ್ಲವೂ ಒಳ್ಳೆಯ ಬೆಳೆವಣಿಗೆಯಾಗಿದೆ ಎಂದು ಹೇಳಿದರು.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸಬೇಕಿದೆ. ಈ ಬಗ್ಗೆ ಸರ್ಕಾರ ಬೇಗನೆ ತೀರ್ಮಾನ ಕೈಗೊಳ್ಳಬೇಕು. ನಮಗೆ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ, ಅದು ಶೀಘ್ರದಲ್ಲಿ ಆಗಬೇಕಿದೆ. ಶಿಕ್ಷಣದಲ್ಲಿ ಭಗವದ್ಗೀತೆ ಸೇರಿಸುವ ಅವಶ್ಯಕತೆ ಬಹಳಷ್ಟಿದೆ. ವಿದ್ಯಾರ್ಥಿಗಳಲ್ಲಿ ಅತ್ಯಾಚಾರದಂತಹ ಸಂಗತಿ, ಯುವಜನರಲ್ಲಿ ಆತ್ಮಹತ್ಯೆಯಂತಹ ಯೋಚನೆಗಳು ಹೆಚ್ಚುತ್ತಿವೆ. ಇವೆಲ್ಲ ತೊಲಗಿಸಲು ಬಾಲ್ಯದಿಂದಲೇ ಭಗವದ್ಗೀತೆಯ ಕಲಿಕೆ ಬೇಕಾಗಿದೆ. ಮುಂದೆ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.
ವ್ಯಕ್ತಿ ನಿರ್ಮಾಣ, ನೈತಿಕತೆ ಪುನರ್ ಸ್ಥಾಪನೆ, ಸಾಮಾಜಿಕ ಸಮಸ್ಯೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ವಿಷಯಗಳನ್ನಿಟ್ಟುಕೊಂಡು ಭಗವದ್ಗೀತೆ ಅಭಿಯಾನ ಹಮ್ಮಿಕೊಂಡಿದ್ದು, ಇದರಿಂದ ಒಳ್ಳೆಯ ಪರಿಣಾಮ ಕಂಡು ಬಂದಿದೆ ಎಂದು ಹೇಳಿದರು.
ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ ಚಂದ ಗೆಹ್ಲೋಟ್, ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತಿತರರಿದ್ದರು.