ಪಟಾಕಿ ಕಾರ್ಖಾನೆಯಲ್ಲಿ ದುರಂತ: ೧೧ ಜನರ ಸಾವು

Advertisement

ಭೋಪಾಲ್: ಮಧ್ಯಪ್ರದೇಶದ ಹರ್ದಾ ನಗರದ ಹೊರವಲಯದಲ್ಲಿರುವ ಬೈರಾಘಡದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಮುಂಜಾನೆ ಭೀಕರ ಪಟಾಕಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಹನ್ನೊಂದು ಜನರು ಸಾವಿಗೀಡಾಗಿದ್ದು ಇತರ ೨೦೦ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಾಲ್ವರು ಗಾಯಾಳುಗಳೂ ಸೇರಿದ್ದಾರೆ.
ಕಾರ್ಖಾನೆಯಲ್ಲಿ ಒಂದು ಸ್ಫೋಟ ಸಂಭವಿಸಿದ ನಂತರ ಹಲವಾರು ಸ್ಫೋಟಗಳು ಉಂಟಾಗಿವೆ. ಇದರಿಂದ ಬೆಂಕಿಯ ಜ್ವಾಲೆ ಕಾರ್ಖಾನೆಯಿಡೀ ವ್ಯಾಪಿಸಿದೆ. ಪ್ರಬಲ ಸ್ಫೋಟದ ಸದ್ದಿಗೆ ಸಮೀಪದ ೬೦ ಮನೆಗಳು ನೆಲಸಮವಾಗಿರುವುದಲ್ಲದೆ, ವಾಹನಗಳಲ್ಲಿ ಪ್ರಯಾಣಿಸು­ತ್ತಿದ್ದ ೩೬ಕ್ಕೂ ಹೆಚ್ಚು ಜನರು ತೊಂದರೆಗೀಡಾದರು. ಬೆಂಕಿಯ ಜ್ವಾಲೆಯ ಕಿಡಿಗಳು ಹಾರಿ ಭಾರಿ ಸಂಖ್ಯೆಯ ದ್ವಿಚಕ್ರವಾಹನಗಳಿಗೆ ಬೆಂಕಿ ಹತ್ತಿಕೊಂಡವು. ಸ್ಫೋಟದ ಸದ್ದು ಎಷ್ಟು ತೀವ್ರವಾಗಿತ್ತೆಂದರೆ ಸಮೀಪದ ನರ್ಮದಾಪುರಂ ಜಿಲ್ಲೆಯ ಸಿಯೊನಿ ಮಲ್ವಾ ಪ್ರದೇಶದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಜನರು ಹೇಳಿಕೊಂಡಿದ್ದಾರೆ.
ಅಗ್ನಿಶಾಮಕ ವಾಹನಗಳು ಆ ಕೂಡಲೇ ಸ್ಥಳಕ್ಕೆ ಬಂದು ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿದವು. ಇದರ ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನೂ ಕರೆಸಿ ಬೆಂಕಿಯಲ್ಲಿ ಸಿಲುಕಿರುವ ಕಾರ್ಖಾನೆಯ ಸಿಬ್ಬಂದಿಯ ರಕ್ಷಿಸಲು ಪ್ರಯತ್ನಿಸಲಾಗಿದೆ. ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಂಡ ಕಾರ್ಖಾನೆಯ ಕಾರ್ಮಿಕರೊಬ್ಬರು ಹೇಳಿಕೊಂಡಂತೆ ದುರಂತ ಸಮಯದಲ್ಲಿ ೧೫೦ ಮಂದಿ ಕಾರ್ಯನಿರ್ವಹಿಸುತ್ತಿದ್ದರು.
ನತದೃಷ್ಟರ ಕುಟುಂಬಗಳಿಗೆ ಮಧ್ಯಪ್ರದೇಶದ ಮೋಹನ ಯಾದವ್ ಸರ್ಕಾರ ತಲಾ ೪ ಲಕ್ಷ ರೂ. ಹಾಗೂ ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ೨ ಲಕ್ಷ ರೂ. ಹಾಗೂ ಗಾಯ­ಗೊಂಡವರಿಗೆ ತಲಾ ೫೦ ಲಕ್ಷ ರೂ ಪರಿಹಾರ ಪ್ರಕಟಿಸಲಾಗಿದೆ.