ಧಾರವಾಡ: ವೇದಾಂತ ಶಾಸ್ತ್ರೀ, ಕವಿವಿ ಸಂಸ್ಕೃತ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಪಂಡಿತರತ್ನಂ ಪ್ರಶಸ್ತಿ ಪುರಸ್ಕೃತ ಡಾ. ಪಂ. ಮಳಗಿ ಜಯತೀರ್ಥಾಚಾರ್ಯರು ರವಿವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ೭೩ನೇ ವಯಸ್ಸಿನಲ್ಲಿ ಇಲ್ಲಿಯ ಗಾಂಧಿನಗರದ ನಿವಾಸದಲ್ಲಿ ರವಿವಾರ ಮುಂಜಾನೆ ನಿಧನರಾದರು.
ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಮತ್ತು ಶಿಷ್ಯವೃಂದವಿದೆ. ೧೯೪೯ರ ಜೂ.೫ರಂದು ಜನಿಸಿದ ಅವರು, ಅನೇಕ ಗ್ರಂಥಗಳ ಕರ್ತೃವಾಗಿ, ಪ್ರವಚನಕಾರರಾಗಿ, ಮಾಧ್ವವಾಙ್ಮಯಕ್ಕೆ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಸಂಖ್ಯ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ.
ನಾಡಿನ ವಿವಿಧ ಶ್ರೀಗಳಿಂದ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದ ಇವರು, ಇತ್ತೀಚೆಗೆ ಧಾರವಾಡದಲ್ಲಿ ನಡೆದ ಮಾಧ್ವ ತತ್ವಜ್ಞಾನ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಹೆಮ್ಮೆಯ ಸಂಗತಿ. ಪಂ. ಮಳಗಿ ಜಯತೀರ್ಥಾಚಾರ್ಯರಿಗೆ ನಾಡಿನಾದ್ಯಂತ ಶಿಷ್ಯಬಳಗವಿದ್ದು, ಇಂದು ಗುರುವಿನ ಅಗಲಿಕೆಯ ನೋವಿನಲ್ಲಿದ್ದಾರೆ.