ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಲ್ಲ: ಯತ್ನಾಳ್ ಖಡಕ್ ಉತ್ತರ

ಯತ್ನಾಳ
Advertisement

ವಿಜಯಪುರ : ಪಂಚಮಸಾಲಿ ಹೋರಾಟ ಈಗಾಗಲೇ ಸಾಕಷ್ಟು ಮಾಡಿದ್ದೇವೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮತ್ತೆ ಮತ್ತೆ ಭಾಗವಹಿಸಲು ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮೀಸಲಾತಿ ನೀಡಿ, ಅಧಿಸೂಚನೆ ಹೊರಡಿಸಿದ್ದೇವೆ. ಸುಗ್ರೀವಾಜ್ಞೆಯೂ ಆಗಿದೆ. ಈಗ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಅನೇಕ ಕಾಂಗ್ರೆಸ್ ನಾಯಕರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಈಗ ಮೀಸಲಾತಿಗೆ ಸಂಬಂಧಿಸಿದ ಕೆಲಸಗಳನ್ನು ಶಿಷ್ಯಂದಿರಾದ ಲಕ್ಷ್ಮಿ ಹೆಬ್ಬಾಳಕರ, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಮೂಲಕ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಮಾಡಿಸಲಿ ಎಂದರು.

ಈ ಹಿಂದೆ ಹಿಂದುಳಿದ ಶಾಸಕ ವಿಜಯಾನಂದ ಕಾಶಪ್ಪನವರ ಅವರು, ಹಿಂದುಳಿದ ವರ್ಗಗಳ 2 ‘ಎ’ಗೆ ಇರುವ ಶೇ 15ರಷ್ಟು ಮೀಸಲಾತಿ ಪಂಚಮಸಾಲಿಗಳಿಗೆ ಕೊಡಬೇಕು ಎಂದು ನಮ್ಮ ಬಿಜೆಪಿ ಸರ್ಕಾರಕ್ಕೆ ಆಗ್ರಹ ಮಾಡಿದ್ದರು. ಈಗ ಅವರದ್ದೇ ಸರ್ಕಾರವಿದೆ. ಇದನ್ನು ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಸಜೀವವಾಗಿ ಬಂದರೂ ಬಿಜೆಪಿಗೆ ತೆಗೆದುಕೊಳ್ಳಲ್ಲ. ಹೆಣವಾಗಿ ಬಂದರೆ ತೆಗೆದುಕೊಳ್ಳುತ್ತೇವಾ ಎಂದು ಪ್ರಶ್ನೆ ಮಾಡಿದರು.