ಪಂಚಮಸಾಲಿ ಮೀಸಲಾತಿ ಘೋಷಿಸದಿದ್ದರೆ ಸರಕಾರಕ್ಕೆ ಕಷ್ಟದ ದಿನಗಳು – ವಚನಾನಂದ ಸ್ವಾಮೀಜಿ ಎಚ್ಚರಿಕೆ

Advertisement

ಲಕ್ಷ್ಮೇಶ್ವರ: ಪಂಚಮಸಾಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮೀಸಲಾತಿಯ ನಮ್ಮ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ಗಡುವು ನೀಡಲಾಗುತ್ತಿದ್ದು, ಚಳಿಗಾಲದ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರಕಾರದಿಂದ ೨ ಎ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಸರಕಾರಕ್ಕೆ ಮುಂದಿನ ದಿನಮಾನಗಳು ಕಷ್ಟದಾಯಕವಾಗಲಿವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜ. ಶ್ರೀ ವಚನಾನಂದ ಮಹಾಸ್ವಾಮಿಗಳು ಎಚ್ಚರಿಕೆ ನೀಡಿದರು.
ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷ್ಮೇಶ್ವರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮಳ ೧೯೯ ನೇ ವಿಜಯೋತ್ಸವ ಹಾಗೂ ೨೪೪ ನೇ ಜಯಂತ್ಯುತ್ಸವ ಕಾರ್ಯಕ್ರಮ ಹಾಗೂ ಪಂಚಮಸಾಲಿ ೨ ಎ ಮೀಸಲಾತಿ ಹಾಗೂ ಕೇಂದ್ರದ ಓಬಿಸಿ ಮೀಸಲಾತಿಗಾಗಿ ಬೃಹತ್ ಜನಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು
ಮೀಸಲಾತಿಗಾಗಿ ಸರಕಾರದ ಗಮನ ಸೆಳೆಯುವುದು ಸಮಾವೇಶದ ಉದ್ದೇಶವಾಗಿದೆ ಹೊರತು, ಬೇರೆ ಯಾವುದೇ ಸಮಾಜದವರ ಮೀಸಲಾತಿ ಕಸಿಯುವ ಹಕ್ಕೊತ್ತಾಯ ನಮ್ಮ ಸಮಾಜದ್ದಲ್ಲ. ಸುಮಾರು ೨೮ ವರ್ಷಗಳಿಂದ ಮೀಸಲಾತಿಗಾಗಿ ಬೇಡಿಕೆ ಇಡುತ್ತಿದ್ದೇವೆ. ಸರಕಾರ ೧೯ನೇ ತಾರೀಖಿನೊಳಗೆ ವರದಿ ತರಿಸಿಕೊಂಡು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರಾಣ ಬಿಟ್ಟೇವು, ಆದರೆ ಮೀಸಲಾತಿ ಬೇಡಿಕೆ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಿಗಮ ಮಂಡಳಿ ಅಧ್ಯಕ್ಷ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದ್ದು, ಇದಕ್ಕೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುವೆ ಎಂದರು.
ಕಾರ್ಯಕ್ರಮವನ್ನು ಸಚಿವ ಮುರಗೇಶ ನಿರಾಣಿ ಉದ್ಘಾಟಿಸಿದರು. ಸಭೆಯಲ್ಲಿ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ಶಾಸಕರಾದ ರಾಮಣ್ಣ ಲಮಾಣಿ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಬಾವಿ ಬೆಟ್ಟಪ್ಪ, ಬಿ.ಸಿ.ಉಮಾಪತಿ, ಬಸವರಾಜ ದಿಂಡುರ, ವಸಂತಾ ಹುಲ್ಲತ್ತಿ, ರಶ್ಮೀ ಕುಂಕೋದ್, ಈರಣ್ಣ ಕರಿಬಿಷ್ಟಿ, ಅನಿಲಕುಮಾರ ಪಲ್ಲೇದ, ಸಿದ್ದು ಪಾಟೀಲ, ಶಿವು ಗುಡ್ಲಾಪೂರ, ಪ್ರಕಾಶ ಪಾಟೀಲ, ಎಂ.ಎಸ್.ಕರಿಗೌಡ್ರ, ಅನ್ನಪೂರ್ಣ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಸೇರಿದಂತೆ ಅನೇಕ ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ಅಧ್ಯಕ್ಷ ಮಂಜುನಾಥ ಮಾಗಡಿ ಸ್ವಾಗತಿಸಿದರು. ಜಿ.ಎಸ್.ಗುಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಮೇಡ್ಲೇರಿ, ಬೂಪಾಲ್ ಘೋಂಗಡಿ ನಿರೂಪಸಿದರು.
ತಾಲೂಕ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಹರಿದು ಬಂದಿದ್ದರು.