ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ರಘುಪತಿ ಭಟ್ ಪರವಾಗಿ ಪ್ರಚಾರ ನಡೆಸಲು ಚಿಕ್ಕಮಗಳೂರಿಗೆ ಗುರುವಾರ ಆಗಮಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನಿಖೆಯಲ್ಲಿ ನಿರ್ದೋಷಿ ಎಂಬುದು ಸಾಭೀತಾದ್ರೆ ಮತ್ತೆ ಅವರನ್ನು ಸಚಿವ ಸ್ಥಾನದಲ್ಲಿ ಸರ್ಕಾರ ಮುಂದುವರೆಸಬೇಕು ಎಂದರು.
ಸಿಎಂ ಹಾಗೂ ಡಿಸಿಎಂ ಡಬಲ್ ಸ್ಟಾಂಡರ್ಡ್ ಬಿಟ್ಟು, ನೈತಿಕತೆ ಇದ್ದರೆ ಸಚಿವರಿಂದ ರಾಜೀನಾಮೆ ತೆಗೆದುಕೊಳ್ಳಬೇಕು ಎಂದ ಅವರು, ಈ ವಿಷಯದಲ್ಲಿ ಭಂಡತನದ ರಾಜಕಾರಣ ಮಾಡಬಾರದು ಎಂದರು.
ಯಡಿಯೂರಪ್ಪ ಅವರು ಹೇಳಿದಂತೆ ಕೇಳುವ ಭ್ರಮೆಯಲ್ಲಿ ಪಕ್ಷದ ವರಿಷ್ಠರು ಇದ್ದಾರೆ. ತಾವೊಬ್ಬರೆ ಲಿಂಗಾಯಿತ ಸಮುದಾಯದ ನಾಯಕರೆಂದು ಬಿಂಬಿಸಿಕೊಂಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯಿತ ಸಮುದಾಯದವರು ಅವರು ಇಲ್ವಾ, ಸಿ.ಟಿ. ರವಿ ಒಕ್ಕಲಿಗ ನಾಯಕರು. ಈ ಭ್ರಮೆಯಿಂದ ಅವರು ಹೊರಗೆ ಬರಬೇಕು ಎಂದರು.
ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕರು ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ತುಂಬಲು ಸುಮಾರು ೬ ತಿಂಗಳು ಸತಾಯಿಸಿದರು ಎಂದು ಆರೋಪಿಸಿದ ಅವರು, ಬಿಜೆಪಿ ನನ್ನ ತಾಯಿ, ಸಾಯುವವರೆಗೆ ಪಕ್ಷದ ಸಿದ್ಧಾಂತಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.