ನೈತಿಕ ಪೊಲೀಸ್ ಗಿರಿ ಐವರ ವಶ

Advertisement

ಮಂಗಳೂರು: ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರೊಂದಿಗೆ ಸೋಮೇಶ್ವರ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ ಮೂವರು ಅನ್ಯಕೋಮಿನ ವಿದ್ಯಾರ್ಥಿಗಳಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಕಳೆದ ಸಂಜೆ ನಡೆದಿತ್ತು. ಬಂಧಿತರನ್ನು ಯತೀಶ್ ಬಸ್ತಿಪಡ್ಪು, ಸಚಿನ್ ತಲಪಾಡಿ, ತಲಪಾಡಿಯ ಸುಹಾನ್, ಅಖಿಲ್ ಹಾಗೂ ಇನ್ನೋರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಕೇರಳ ಚೆರ್ಕಳದ ಜಾಫರ್ ಶರೀಫ್ ಹಾಗೂ ಮಂಜೇಶ್ವರ ಮೂಲದ ಮುಜೀಬ್ , ಆಶಿಕ್ ಹಲ್ಲೆಗೊಳಗಾದವರು. ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೋಮೇಶ್ವರ ಸಮುದ್ರ ತೀರಕ್ಕೆ ಗುರುವಾರ ಸಂಜೆ ಆಗಮಿಸಿದ್ದರು. ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಹಿಂಬಾಲಿಸಿತ್ತು. ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ತಂಡ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿತ್ತು.
ಪ್ರಕರಣದ ವಿಚಾರಣೆಗಾಗಿ ಮೂರು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಇದೀಗ ತಂಡ ಐವರನ್ಬು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ. ಗಾಯಗೊಂಡ ಯುವಕರ ಜತೆಗಿದ್ದ ಮೂವರು ವಿದ್ಯಾರ್ಥಿನಿಯರನ್ಬು ಠಾಣೆಗೆ ಕರೆಸಿ ಬಳಿಕ ಮನೆಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಶಂಕೆ ಇದೆ.
ಬಿಡುಗಡೆಗೆ ಆಗ್ರಹ..
ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ಬು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅಮಾಯಕ ಕಾರ್ಯಕರ್ತರನ್ಬು ಬಿಡುಗಡೆ ಮಾಡಬೇಕು ಎಂದು ಬಿಜೆಪಿ ದ. ಕ. ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಒತ್ತಾಯಿಸಿದ್ದಾರೆ.