ಹುಬ್ಬಳ್ಳಿ: ದೇಶದ ಅಭಿವೃದ್ಧಿಯಲ್ಲಿ ಭಾರತೀಯ ರೈಲ್ವೆ ವಲಯವು ಮಹತ್ವದ ಪಾತ್ರವಹಿಸಿದೆ. ರೈಲ್ವೆ ಸಿಬ್ಬಂದಿಯ ಕಾರ್ಯದಕ್ಷತೆ, ಬದ್ಧತೆ ಮಾದರಿಯಾದುದು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.
ಇಲ್ಲಿನ ನೈಋತ್ಯ ರೈಲ್ವೆ ವಲಯದ ಆಡಳಿತ ಕಚೇರಿಯಾದ ರೈಲ್ ಸೌಧ, ರೈಲ್ವೆ ಮ್ಯೂಸಿಯಂ, ಥೇಟರ ಕೋಚ್, ರೆಸ್ಟೋರೆಂಟ್ ಕೋಚ್‌ಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ರೈಲ್ವೆ ಪುರುಷ ಮತ್ತು ಮಹಿಳಾ ಸಿಬ್ಬಂದಿ ವರ್ಗವೂ ವೃತ್ತಿಪರತೆಯಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅವರು, ನೈಋತ್ಯ ರೈಲ್ವೆಯು ೨೦೨೨ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಸಾಧಿಸಿದ ಸಾಧನೆ, ಕೈಗೊಂಎ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ರೈಲ್ವೆ ಮ್ಯೂಸಿಯಂ ನೋಡಿ ಹರ್ಷ ವ್ಯಕ್ತಪಡಿಸಿದ ರಾಜ್ಯಪಾಲರು ಅಲ್ಲಿನ ಪ್ರತಿ ವಸ್ತುಗಳು, ಬಳಕೆ ಕಾಲದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹಾಗೂ ನೈಋತ್ಯ ರೈಲ್ವೆಯ ಪ್ರಮುಖ ಅಧಿಕಾರಿಗಳು ಇದ್ದರು.