ಹುಬ್ಬಳ್ಳಿ: ನೇಹಾ ಹಿರೇಮಠ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ ಬೆನ್ನಲ್ಲೇ ಇದೀಗ ಪ್ರೀತಿ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೋರ್ವ ಇಂದು ಬೆಳಗಿನ ಜಾವ ಮನಬಂದಂತೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ(೨೦) ಸಾವನ್ನಪ್ಪಿದ ಯುವತಿಯಾಗಿದ್ದು, ಈಕೆಗೆ ನಗರದ ಯಲ್ಲಾಪುರ ಓಣಿಯ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ(೨೧) ಎಂಬಾತ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ ಆರೋಪಿ ಅಂಜಲಿಯನ್ನು ಪ್ರೀತಿ ವಿಚಾರವಾಗಿ ಪೀಡಿಸುತ್ತಿದ್ದ. ಅಲ್ಲದೇ ತನ್ನ ಜೊತೆಗೆ ಮೈಸೂರಿಗೆ ಬರಲಿಲ್ಲವೆಂದರೆ ಕಳೆದ ತಿಂಗಳು ನೇಹಾ ಹಿರೇಮಠ ಹತ್ಯೆಯಾದ ರೀತಿಯಲ್ಲಿಯೇ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಆರೋಪಿ ಜೀವ ಬೆದರಿಕೆ ಹಾಕಿದ್ದ. ಜೀವ ಬೆದರಿಕೆಗೆ ಹೆದರಿದ ಅಂಜಲಿ ಹಾಗೂ ಆಕೆಯ ಸಹೋದರಿಯರು ಓಣಿಯ ಹಿರಿಯರೊಂದಿಗೆ ಬೆಂಡಿಗೇರಿ ಪೊಲೀಸ್ ಠಾಣೆ ತೆರಳಿ ವಿಷಯ ತಿಳಿಸಿ ರಕ್ಷಣೆ ಕೋರಿದ್ದರು. ಆರೋಪಿ ಬಂಧಿಸಲು ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ, ಪೊಲೀಸರು ಇದೆಲ್ಲ ನಿಮ್ಮ ಕಲ್ಪನೆ. ಹಾಗೇನೂ ಆಗಲ್ಲ. ಆರೋಪಿ ಕರೆಸಿ ವಿಚಾರಣೆ ಮಾಡಿ ಎಚ್ಚರಿಕೆ ನೀಡಲಾಗುತ್ತದೆ ಎಂದು ಹೇಳಿ ಕಳಿಸಿದ್ದರಂತೆ. ಆದರೆ, ಅವರ ವಿರುದ್ಧ ಏನೂ ಕ್ರಮ ಕೈಗೊಂಡಿರಲಿಲ್ಲ ಎಂದು ಹತ್ಯೆಯಾದ ಯುವತಿಯ ಸಹೋದರಿಯರು, ಸಂಬಂಧಿಕರು, ಓಣಿಯ ಮುಖಂಡರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.