ಡಿಯರ್ ಮದ್ರಾಮಣ್ಣೋರೆ…
ಇಷ್ಟುದಿನ ನೀವು ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸಲಿಲ್ಲ. ನಮಗೆ ಅದರ ಬಗ್ಗೆ ಯಾವುದೇ ಸಿಟ್ಟಿಲ್ಲ. ನನಗೆ ಗೊತ್ತು ನಿಮಗೆ ಯಾವುದಕ್ಕೂ ಪುರುಸೊತ್ತು ಇಲ್ಲ. ಆದರೆ ಈಗ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ನಾವು ಜೀವನಪೂರ್ತಿ ಬ್ಯಾಚುಲರ್ ಆಗಿರುತ್ತೇವೇನೋ ಅನಿಸಿಬಿಟ್ಟಿದೆ. ನೀವು ತಿಳಿಯಬೇಕು-ನಾವು ಉಳಿಯಬೇಕು ಅಷ್ಟೇ. ಏನಪ್ಪ ಇವನು ಹೀಗೆ ಬರೆದಿದ್ದಾನೆ ಎಂದು ನಿಮಗೆ ಅನಿಸಬಹುದು. ಆದರೆ ಪರಿಸ್ಥಿತಿ ಹಾಗಿದೆ ಸ್ವಾಮೀ… ನಿಮ್ಮನ್ನ ಬಿಟ್ಟು ಯಾರಿಗೆ ಹೇಳೋಣಾ ನಮ್ ಪ್ರಾಬ್ಲಮ್ಮು..? ನಾನು ಡೈರೆಕ್ಟಾಗಿ ವಿಷಯಕ್ಕೆ ಬರುತ್ತೇನೆ…ದಯವಿಟ್ಟು ಶಾಂತ ರೀತಿಯಿಂದ ಕೇಳಿ..ಸಾಹೇಬರೇ…ಎರಡು ವರ್ಷದ ಹಿಂದೆ ನಮಗೆ ಮದುವೆಯಾಗಲು ಭರ್ಜರಿ ವಯಸ್ಸಿತ್ತು. ಕಾರಣಾಂತರದಿಂದ ಆಗಲಿಲ್ಲ ಅಷ್ಟೇ. ಈಗ ಆಗಬೇಕು ಅಂದರೆ ಯಾರೂ ಕನ್ಯೆ ಕೊಡುತ್ತಿಲ್ಲ. ಮೊನ್ನೆ ಒಂದು ಹುಡುಗಿ ನನಗೆ ಮನಸ್ಸಿಗೆ ಬಂದಿದ್ದಳು. ನನ್ನ ಅಪ್ಪ-ಅಮ್ಮ; ಅವಳ ಅಪ್ಪ ಅಮ್ಮ ಎಲ್ಲರೂ ಒಪ್ಪಿಕೊಂಡಿದ್ದರು. ನಾನೂ ಸಹ ಅವರ ಮಾಳಿಗೆ ಮೇಲೆ ಹೋಗಿ ಪರ್ಸನಲ್ ಆಗಿ ಮಾತನಾಡಿದೆ. ಆಕೆ ನನಗೂ ಹಿಡಿಸಿದಳು-ನಾನು ಆಕೆಗೂ ಲೈಕ್ ಆದೆ. ಅದಾದ ಮೂರೇ ದಿನಕ್ಕೆ… ನಾನೊಲ್ಲೆ… ನಾನೊಲ್ಲೆ ಎಂದು ಮೆಸೇಜ್ ಮಾಡಿ ನನ್ನ ಕನಸಿನ ಸೌಧ ಕುಸಿಯುವ ಹಾಗೆ ಮಾಡಿದಳು. ನನ್ನ ಅಪ್ಪ ಅಮ್ಮ ಅವರಲ್ಲಿಗೆ ಹೋಗಿ… ಯಾಕಮ್ಮಾ ಒಲ್ಲೆ ಅಂತೀಯ ಎಂದು ಕೇಳಿದರೆ…ಹೋಗ್ರೀ…ಹೋಗ್ರಿ…ಅಲ್ಲಿ ನೀರಿಲ್ಲ-ಏನಿಲ್ಲ. ನಾವ್ಯಾಕೆ ಕನ್ಯಾ ಕೊಡೋಣ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದರು. ಈಗ ನೀವು ದಿನಕ್ಕೆ ನಾಲ್ಕೈದು ಟ್ಯಾಂಕರ್ ನೀರು ಬಿಡಿ ಇಲ್ಲದಿದ್ದರೆ ನಮ್ಮನ್ನು ಚಚ್ಚಿಬಿಡಿ… ನೀವು ತಿಳಿದರೆ ನಾವು ಉಳಿಯುತ್ತೇನೆ. ಉತ್ತರ ಕೊಡಿ ಪ್ಲೀಸ್..ಇಂತಿ ನಿಮ್ಮ ತಮ್ಮನಂತಹ ಪ್ರಜೆ ತಿಗಡೇಸಿ…
ಡಿಯರ್ ತಮ್ಮನಂತಹ ಪ್ರಜೆಯೇ ಕೇಳು…..
ನಿಜಕ್ಕೂ ನಿನಗೆ ಜನುಮ ಜನುಮಾಂತರ ಪುಣ್ಯ ತಗುಲಿದೆ ಎಂದು ತಿಳಿದುಕೋ….ಕನ್ಯಾ ಕೊಡುವುದಿಲ್ಲ ಎಂದು ಹೇಳಿದರೆ ಅದು ನಿನಗೆ ಪ್ಲಸ್ ಅಂತ ತಿಳಿದುಕೋ…ಒಂದು ಬಾರಿ ನಿನಗೆ ಕನ್ಯಾ ಕೊಟ್ಟರೆಂದು ತಿಳಿ…ಈಗ ನೀರಿನದೊಂದೇ ಸಮಸ್ಯೆ ಇದೆ. ಆಗ ಇಲ್ಲದ ಸಾವಿರಾರು ಸಮಸ್ಯೆ ಎದುರಾಗುತ್ತವೆ. ಮುಂಜಾನೆಯಿಂದ ಸಂಜೆಯವರೆಗೂ ಬರೀ ಸಮಸ್ಯೆಗಳಲ್ಲಿಯೇ ಮುಳುಗಿ ಹೋಗುತ್ತೀಯ. ಆಗುವುದೆಲ್ಲ ಒಳ್ಳೆಯದೇ ಆಗುತ್ತದೆ ಎಂದು ಸುಮ್ಮನಾಗು ಅಷ್ಟೇ.
ಇಂತಿ ನಿನ್ನ
ಮದ್ರಾಮಣ್ಣೋರು