ಮಂಗಳೂರು; ಸುರತ್ಕಲ್‌ನಲ್ಲಿರುವ ಎನ್‌ಐಟಿಕೆಯಲ್ಲಿ ಬಣ್ಣದ ಹಬ್ಬ ಹೋಳಿಯನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಗಿದೆ. ಹೋಳಿ ಹಬ್ಬ ಆಚರಣೆಗೆ ಯಾವುದೇ ಅಪಸ್ವರ ಇಲ್ಲ. ಆದರೆ ದುಡ್ಡುಕೊಟ್ಟು ಹೊರಗಡೆಯಿಂದ ನೀರು ಖರೀದಿಸಿ ನೀರನ್ನು ಪೋಲು ಮಾಡಿ ಹೋಳಿ ಅಚರಿಸಿರುವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಎನ್‌ಐಟಿಕೆ ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರದ ಪ್ರತಿಷ್ಠಿತ ಇಂಜನಿಯರಿಂಗ್ ಕಾಲೇಜುಗಳಲ್ಲೊಂದು. ಎನ್‌ಐಟಿಕೆ ನಡೆಯುತ್ತಿರುವುದು ಸರಕಾರದ ದುಡ್ಡಿನಿಂದ. ಇಂತಹ ಒಂದು ಪ್ರತಿಷ್ಠಿತ ಸಂಸ್ಥೆ ನೈಸರ್ಗಿಕ ಸಂಪತ್ತು ನೀರನ್ನು ಹೋಳಿ ಆಚರಣೆಗಾಗಿ ಬಳಸಿ ಪೋಲು ಮಾಡಿರುವುದು ಟೀಕೆಗೆ ಗ್ರಾಸವಾಗಿದೆ. ಒಂದೆಡೆ ನೀರಿಲ್ಲ, ಇನ್ನೊಂದೆಡೆ ದುಡ್ಡು ನೀಡಿ ಹೊರಗಡೆಯಿಂದ ತಲಾ ೧೨ ಸಾವಿರ ಲೀಟರ್‌ನ ಮೂರು ಟ್ಯಾಂಕರ್ ನೀರನ್ನು ಹೋಳಿಗೆ ಬಳಸಲಾಗಿದೆ. ಎನ್‌ಐಟಿಕೆ ಹಾಸ್ಟೆಲ್ ವಿದ್ಯಾರ್ಥಿಗಳು ಹೋಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ. ಹಾಸ್ಟೆಲ್ ಫಂಡ್‌ನ್ನು ನೀರು ಹಾಗೂ ಹೋಳಿ ಬಣ್ಣ ಖರೀದಿಸಲು ಬಳಸಲಾಗಿದೆ ಎನ್ನಲಾಗುತ್ತಿದೆ. ನೈಸರ್ಗಿಕ ಬಣ್ಣವನ್ನು ಬಳಸದೆ ರಾಸಾಯನಿಕ ಬಣ್ಣವನ್ನು ಬಳಸಲಾಗಿದೆ ಎಂಬ ಆರೋಪವೂ ಇದೆ.
ಕಳೆದ ವರ್ಷ ಎನ್‌ಐಟಿಕೆಯಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೀರಿನ ಸಮಸ್ಯೆಯೇ ದೊಡ್ಡ ಸುದ್ದಿಯಾಗಿತ್ತು. ಅದಕ್ಕಾಗಿ ಈ ಸಲ ಸಿಲೆಬಸ್‌ನ್ನು ಮುಗಿಸಲು ಜೂನ್ ತನಕ ಕಾಯದೆ ಮಾರ್ಚ್‌ನಲ್ಲೇ ತರಾತುರಿಯಲ್ಲಿ ಮುಗಿಸಲಾಗಿದೆ.
ಹೋಳಿ ಆಚರಿಸಿ ಆದರೆ ನೀರಿಲ್ಲದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಟ್ಯಾಂಕರ್ ಟ್ಯಾಂಕರ್ ನೀರು ಬಳಸಿ, ನೀರು ಪೋಲು ಮಾಡಿ ಹೋಳಿ ಆಚರಿಸುವ ಅವಶ್ಯಕತೆ ಇತ್ತೇ ಎಂಬುದು ಸಾರ್ವತ್ರಿಕ ಪ್ರಶ್ನೆ. ನೀರನ್ನು ಇತಿಮಿತಿಯಾಗಿ ಬಳಸಿ ಮಾದರಿಯಾಗಬೇಕಿದ್ದ ಸಂಸ್ಥೆಯೊಂದು ನೀರನ್ನು ಪೋಲು ಮಾಡಿ ಸಮಾಜಕ್ಕೆ ಏನು ಸಂದೇಶ ನೀಡುತ್ತಿದೆ.