ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ನೀರಿನ ಗುಂಡಿಯಲ್ಲಿ ಎಸೆದು ಕೊಲೆ ಮಾಡಿರುವ ಘಟನೆ ಸೇಡಂ ತಾಲೂಕಿನ ಗೋಪನಪಲ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಅನಿತಾ ಬಸಪ್ಪ ಪೂಜಾರಿ(28) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳಾದ ಮೋನಿಕಾ(6) ಮತ್ತು ಸಿದ್ದಲಿಂಗ(4) ಅವರನ್ನು ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿದ್ದಾಳೆ.
ಮಕ್ಕಳನ್ನು ಸಾಯಿಸಿದ ನಂತರ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಗ್ರಾಮಸ್ಥರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋಪನಪಲ್ಲಿ ಗ್ರಾಮದ ಬಸಪ್ಪ ಪೂಜಾರಿ ಮತ್ತು ಗುರುಮಠಕಲ್ ತಾಲೂಕಿನ ಗಾಜರಕೋಟ ಸಮೀಪದ ಶಿವಪುರ ಗ್ರಾಮದ ಅನಿತಾ ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೂರು ದಿನಗಳ ಹಿಂದೆಯೂ ಜಗಳ ನಡೆದು ಮಾತು ಬಿಟ್ಟಿದ್ದರು. ಇದರಿಂದ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳನ್ನು ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಳು ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಮುಧೋಳ ಪೊಲೀಸ್ ಠಾಣೆಯ ಪಿ.ಐ. ಸಂದೀಪ್ ಮುರುಗನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅನಿತಾ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.