ನೀರಿಗಾಗಿ ನೀರೆಯ ಸೀರೆ ಜಗ್ಗಾಟ

Advertisement

ವಿಲಾಸ ಜೋಶಿ
ಬೆಳಗಾವಿ: ಹತ್ತಕ್ಕೂ ಹೆಚ್ಚು ಜನರು ನಡು ರಸ್ತೆಯಲ್ಲಿ ವಿವಾಹಿತೆಯೊಬ್ಬಳ ಸೀರೆ ಬಿಚ್ಚಿ ಎಳೆದಾಡಿದ ಮತ್ತೊಂದು ಅಮಾನವೀಯ ಘಟನೆಯೊಂದು ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿ ಸೀರೆ ಎಳೆದಾಡಿದ ಬಗ್ಗೆ ಸಿಸಿಟಿವಿ ಸಾಕ್ಷಿಯನ್ನು ಸಂತ್ರಸ್ತೆ ಪೊಲೀಸ್ ಠಾಣೆಗೆ ಕೊಟ್ಟರೂ ಇಲ್ಲಿಯವರೆಗೂ ಅದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಂಗಳವಾರ ತನ್ನ ಪತಿಯೊಂದಿಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮೆಟ್ಟಿಲು ಹತ್ತಿ ಲಿಖಿತ ದೂರು ನೀಡಿದ್ದಾರೆ.
ಈ ಸಂತ್ರೆಸ್ತೆಗೆ ಬೆಳಗಾವಿಯ ಭಾರತೀಯ ಸಂಸ್ಕೃತಿ ಫೌಂಡೇಶನ್ ಸಾಥ್ ನೀಡಿದೆ. ಇತ್ತೀಚೆಗಷ್ಟೇ ಬೆಳಗಾವಿ ತಾಲೂಕಿನಲ್ಲಿ ಪತಿ, ಪತ್ನಿ ಜಗಳದಲ್ಲಿ ಅನಗತ್ಯ ಮಧ್ಯಸ್ಥಿಕೆ ವಹಿಸಿದ್ದ ಮಹಿಳಾ ಸಂಘವೊಂದು ಮಹಿಳೆಗೇ ಕೊಡಬಾರದ ಕಾಟ ಕೊಟ್ಟು ನೈತಿಕ ಪೊಲೀಸ್‌ಗಿರಿ ಮೆರೆದಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.
ಕಂಕಣವಾಡಿಯಲ್ಲಿ ನಡೆದಿದ್ದು ಏನು?
ರಾಯಬಾಗ ತಾಲೂಕಿನ ಕಂಕಣವಾಡಿಯ ತೋಟದ ಮನೆಯಲ್ಲಿ ಫೆ. ೨೩ರಂದು ರಾತ್ರಿ ಈ ಘಟನೆ ನಡೆದಿದೆ.
ಸಂತ್ರಸ್ತೆಯ ಪತಿ ನಾಗಪ್ಪ ಅಂದು ಜಮೀನು ಪಕ್ಕದಲ್ಲಿರುವ ಕೆನಾಲಿನಿಂದ ನೀರು ಹಾಯಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ರಾತ್ರಿ ೧೦.೨೦ರ ಸುಮಾರಿಗೆ ನಾಗಪ್ಪ ಮತ್ತು ವಿಠಲ ಎಂಬುವರ ನಡುವೆ ವಾದವಿವಾದ ನಡೆದಿದೆ. ಅದು ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸಿದ್ದಾರೆ, ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ದಿ. ೨೪ ರಂದು ದೂರು ಸಹ ದಾಖಲಾಗಿದೆ. ನಂತರ, ರಾತ್ರಿ ೧೧ಕ್ಕೆ ಸುಮಾರು ೫೦ಕ್ಕೂ ಹೆಚ್ಚು ಜನ ನಮ್ಮ ಮನೆಗೆ ಬಂದು ಕಲ್ಲು ತೂರಾಟ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದರು. ಇದರಿಂದ ಗಾಬರಿಗೊಂಡ ನಾನು ಹೊರಗೆ ಬಂದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರು ನಡು ರಸ್ತೆಯಲ್ಲಿ ನನ್ನ ಸೀರೆ ಬಿಚ್ಚಿ ಎಳೆದಾಡಿ ಹೊಡೆದು ಕೈ ಮುರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸಂತ್ರಸ್ತೆ ಎಸ್ಪಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ರಾಯಬಾಗ ಪೊಲೀಸರ ಗಮನಕ್ಕೆ ತಂದರೂ ತಪ್ಪಿತಸ್ಥರ ವಿರುದ್ಧ ಯಾವುದೇ ರೀತಿಯ ಕಾನೂನಿನ ಕ್ರಮ ಇದುವರೆಗೆ ತೆಗೆದುಕೊಂಡಿಲ್ಲ ಎಂದು ಸಂತ್ರಸ್ತೆ ಎಸ್ಪಿ ಕಚೇರಿಯಲ್ಲಿ ಕಣ್ಣೀರಿಟ್ಟಿದ್ದಾಳೆ.
ಎಸ್ಪಿಯವರಿಗೆ ಕೊಟ್ಟ ದೂರಿನಲ್ಲಿ ಹತ್ತು ಜನರ ಹೆಸರನ್ನು ಉಲ್ಲೇಖಿಸಲಾಗಿದೆ. ಅವರಿಂದ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.