ನೀತಿ ಸಂಹಿತೆಯ ಸಂತಸ-ಸಂಕಟ

Advertisement

ಚುನಾವಣೆಯ ಸಂದರ್ಭದಲ್ಲಿ ಸಮತಟ್ಟಾದ ಮೈದಾನ ಸೃಷ್ಟಿಯಾದರೆ ಮಾತ್ರ ಮತದಾರರ ವಿವೇಚನಾತ್ಮಕ ಮತದಾನಕ್ಕೆ ಅವಕಾಶ ಎಂಬ ನಂಬಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಏಕೆಂದರೆ, ಆಮಿಷಗಳಿಗೆ ಮತದಾರರು ಮರುಳಾಗಬಹುದು ಎಂಬ ಪರಿಜ್ಞಾನದಿಂದಾಗಿ ಸಂವಿಧಾನದ ನಿರೂಪಕರು ಯೋಚಿಸಿ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾಗುವಂತೆ ಮಾಡಿರುವುದು ಒಳ್ಳೆಯ ಬೆಳವಣಿಗೆಯೇ. ಈ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಸರ್ಕಾರಗಳು ನೀತಿ ನಿಲುವುಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲು ನಿರ್ಬಂಧ ಉಂಟು. ಆದರೆ, ದಿನನಿತ್ಯದ ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಇದನ್ನು ವಿಸ್ತರಿಸಿ ಹೇಳಬೇಕಾದರೆ ಅಧಿಕಾರಸ್ಥ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಯಾವುದೇ ಮಾರ್ಗದಲ್ಲಿ ಚಲಾಯಿಸಲಾಗಲೀ ಹಾಗೂ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಹೀಗಾಗಿ ನೀತಿ ಸಂಹಿತೆಯ ಜಾರಿಯಿಂದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಮುಖಂಡರು ಚುನಾವಣಾ ಕಣದ ಸಮತಟ್ಟಿನ ಮೈದಾನದಲ್ಲಿ ಮತದಾರರ ಮೆಚ್ಚುಗೆ ಪಡೆಯಲು ಮುಕ್ತ ಸ್ವಾತಂತ್ರ್ಯ ಕಲ್ಪಿಸಿರುವುದರಿಂದ ಯಾವುದೇ ರೀತಿಯ ಪ್ರಭಾವಕ್ಕೆ ಅವಕಾಶ ಇರುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಕ್ರಮ ಒಳ್ಳೆಯದೇ. ಆದರೆ, ರೂಪಾಂತರಗೊಳ್ಳುತ್ತಿರುವ ಭಾರತದ ಸಂದರ್ಭದಲ್ಲಿ ಚುನಾವಣೆಗಳು ಒಂದು ಅಥವಾ ಎರಡು ಹಂತದ ಬದಲು ಏಳೆಂಟು ಹಂತಗಳಿಗೆ ವಿಸ್ತರಣೆಗೊಳ್ಳುತ್ತಿರುವ ಕಾಲಘಟ್ಟದಲ್ಲಿ ನೀತಿ ಸಂಹಿತೆಯ ಅವಧಿ ಎಂಬತ್ತು ದಿನಗಳಿಗೂ ಹೆಚ್ಚಿನ ಸಮಯ ಜಾರಿಯಲ್ಲಿರುವುದರಿಂದ ಸಾರ್ವಜನಿಕರ ಸಂಕಟಗಳಿಗೆ ಪರಿಹಾರ ಒದಗಿಸುವುದು ನಿಜಕ್ಕೂ ದೊಡ್ಡ ಸವಾಲು.
ಈಗಿರುವ ನಿಯಮಾವಳಿಯ ಪ್ರಕಾರ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಲೋಕಸಭೆಗೆ ಈ ಬಾರಿ ಏಳು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ ೧೯ರಂದು ಆರಂಭವಾಗುವ ಮೊದಲ ಹಂತದ ಮತದಾನದ ನಂತರ ಜೂನ್ ೧ವರೆಗೆ ಏಳನೇ ಹಂತದ ಮತದಾನ ಮುಗಿದು ಜೂನ್ ೪ರಂದು ಫಲಿತಾಂಶ ಘೋಷಣೆಯಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ, ಅಂದರೆ ಜೂನ್ ೧೦ರವರೆಗೆ ಈ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಒಟ್ಟು ೧೦೦ ದಿನಗಳ ಕಾಲ ದೇಶದಲ್ಲಿ ಆಡಳಿತ ವ್ಯವಸ್ಥೆ ಸ್ಥಗಿತಗೊಳ್ಳುವ ಸ್ಥಿತಿ ಒಳ್ಳೆಯದಲ್ಲ. ಅಧಿಕಾರಿಗಳು ಎಷ್ಟೇ ದಕ್ಷರಾಗಿದ್ದರೂ ನಿಯಮಾವಳಿಯನ್ನು ಅವರಿಗೆ ದಿನನಿತ್ಯದ ಆಡಳಿತದ ನಿರ್ವಹಣೆಗೆ ಕ್ರಮ ಜರುಗಿಸಲಷ್ಟೇ ಸಾಧ್ಯ. ಭೀಕರ ದುರಂತ, ತೀವ್ರ ಸ್ವರೂಪದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ಗಂಡಾಂತರ, ಪ್ರಾಕೃತಿಕ ವಿಕೋಪ ಮುಂತಾದ ಸಂದರ್ಭದಲ್ಲಿ ಅಧಿಕಾರಿಗಳ ಮಟ್ಟದ ಸರ್ಕಾರ ಪರಿಣಾಮಕಾರಿಯಾದ ಕ್ರಮಗಳನ್ನು ಜರುಗಿಸಲು ಸಾಧ್ಯವಾಗದೇ ಸಾರ್ವಜನಿಕರು ಸಂಕಟಕ್ಕೆ ಸಿಕ್ಕಿಬೀಳುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಈ ನೀತಿ ಸಂಹಿತೆ ಸ್ವರೂಪವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕಾದ ಅನಿವಾರ್ಯತೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನಗಂಡು ಶಾಸನದ ತಿದ್ದುಪಡಿಗೆ ಕಾರ್ಯೋನ್ಮುಖವಾಗುವುದು ಅತ್ಯಗತ್ಯ.
ಕರ್ನಾಟಕದಲ್ಲಿ ೧೯೮೫ರಲ್ಲಿ ವಿಧಾನಸಭೆ ವಿಸರ್ಜನೆಗೊಂಡು ಮಧ್ಯಂತರ ಚುನಾವಣೆ ಘೋಷಣೆಯಾದಾಗ ಉಸ್ತುವಾರಿ ಸರ್ಕಾರ ಅಧಿಕಾರದಲ್ಲಿತ್ತು. ನೀತಿ ಸಂಹಿತೆ ಜಾರಿ ಇದ್ದ ಸಂದರ್ಭದಲ್ಲಿ ರಾಜಭವನದ ಮುಂದೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು `ನೀತಿ ಸಂಹಿತೆ ಜಾರಿ ಅನಿವಾರ್ಯ. ಆದರೆ, ಉಸ್ತುವಾರಿ ಸರ್ಕಾರ ಎಂಬ ಪ್ರಸ್ತಾಪ ಸಂವಿಧಾನದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ನಾನೊಬ್ಬ ಮುಖ್ಯಮಂತ್ರಿ. ಇಲ್ಲವೇ ನಾನು ಮುಖ್ಯಮಂತ್ರಿ ಅಲ್ಲ ಎಂಬುದು ನನ್ನ ಅರಿವು. ಸಾರ್ವಜನಿಕರ ಸಂಕಟವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಸ್ವರೂಪದಲ್ಲಿರಲಿ ಅದು ಕಾರ್ಯನಿರ್ವಹಿಸಲೇಬೇಕು. ಹೀಗಾಗಿ ಪ್ರತಿಯೊಂದಕ್ಕೂ ನೀತಿ ಸಂಹಿತೆ ಗುಮ್ಮನನ್ನು ಮುಂದೆ ಮಾಡಬೇಡಿ’ ಎಂದು ವಿವರಿಸಿದ ಬೆಳವಣಿಗೆ ಬಹುಶಃ ಈಗಿನ ಸುದೀರ್ಘಾವಧಿಯ ನೀತಿ ಸಂಹಿತೆಯ ಸಂದರ್ಭದಲ್ಲಿ ಅದರ ಅನಾನುಕೂಲದ ಬಗ್ಗೆ ಮನವರಿಕೆಯಾಗಬಹುದೇನೋ.
ಕಾಲ ಬದಲಾದಂತೆ ಕಾನೂನುಗಳು ಬದಲಾಗಬೇಕು. ಒಂದು ಅಥವಾ ಎರಡು ಹಂತದ ಚುನಾವಣೆಗೆ ರೂಪಿಸಿದ್ದ ನೀತಿ ಸಂಹಿತೆ ಈಗಿನ ಮಟ್ಟಿಗೆ ಅಪ್ರಸ್ತುತ ಎನ್ನುವ ಸ್ವರೂಪದಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ದೋಷವನ್ನು ನಿವಾರಿಸಿ ಚುನಾವಣೆಯ ಅವಧಿ ಗರಿಷ್ಠ ೪೫ ದಿನಗಳವರೆಗೆ ಮಾತ್ರ ನಡೆಯುವಂತೆ ನೋಡಿಕೊಂಡು ನೀತಿ ಸಂಹಿತೆ ಜಾರಿಗೆ ಪ್ರತ್ಯೇಕ ನಿಯಮಾಳಿಯನ್ನು ರೂಪಿಸುವ ಕಡೆ ಎಲ್ಲ ರಾಜಕೀಯ ಪಕ್ಷಗಳು ಗಮನಹರಿಸುವುದು ನಿಜವಾದ ಅರ್ಥದಲ್ಲಿ ದೇಶಸೇವೆ.