ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಭಾರಿ ಅಕ್ರಮದ ಘಾಟು

Advertisement

ರಾಜು ಮಳವಳ್ಳಿ
ಬೆಂಗಳೂರು : ಪ್ರಸಕ್ತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ನೀಟ್’ ಪರೀಕ್ಷೆಯಲ್ಲಿ ಭಾರಿ ಅಕ್ರಮದ ಆರೋಪಗಳು ಕೇಳಿಬಂದಿದ್ದುನೀಟ್’ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಫಲಿತಾಂಶದಲ್ಲಿ ಕಂಡು ಬಂದಿರುವ ಅನೇಕ ಏರುಪೇರುಗಳು ಪರೀಕ್ಷೆ ಮತ್ತು ಮೌಲ್ಯಮಾಪನದ ಪಾರದರ್ಶಕತೆಯ ಬಗ್ಗೆ ಅನುಮಾನ ಹುಟ್ಟಿಸಿದೆ. ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ತಮಗೆ `ನೀಟ್’ ನಿಂದ ಅನ್ಯಾಯವಾಗಿರುವ ಬಗ್ಗೆ ದನಿ ಎತ್ತಿದ ಬೆನ್ನಲ್ಲೇ ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಕಾಂಗ್ರೆಸ್ ಪಕ್ಷ ನೀಟ್ ಅವಾಂತರದ ಕುರಿತು ತೀವ್ರ ಆಕ್ಷೇಪವೆತ್ತಿದ್ದರೆ, ಮರು ಪರೀಕ್ಷೆ ನಡೆಸಬೇಕೆಂಬ ವಿದ್ಯಾರ್ಥಿಗಳು ಮತ್ತು ಪೋಷಕರ ಆಗ್ರಹ ದಿನೇ ದಿನೇ ಹೆಚ್ಚಾಗಿದ್ದು ನೂರ್ಮಡಿಗೊಂಡಿದೆ.
ದೇಶಾದ್ಯಂತ ವೈದ್ಯಕೀಯ ಕೋರ್ಸ್ಗಳಿಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀಟ್ ತರಬೇತಿ ನೀಡುವ ತರಬೇತಿ ಸಂಸ್ಥೆಗಳ ಮಾಫಿಯಾ ಈ ಹಗರಣದ ಹಿಂದೆ ಕೆಲಸ ಮಾಡಿದೆ ಎನ್ನಲಾಗಿದ್ದು ಕೆಲವು ತರಬೇತಿ ಸಂಸ್ಥೆಗಳು ಕೀಉತ್ತರ ಪ್ರಕಟಗೊಳ್ಳುವ ಮುನ್ನವೇ ಪ್ರಕಟಿಸಿದ ವಿದ್ಯಾರ್ಥಿಗಳ ರ‍್ಯಾಂಕ್‌ಗಳನ್ನು ಜಾಹೀರು ಮಾಡಿದ್ದವೆಂದು ತಿಳಿದುಬಂದಿದೆ.
೬೭ ಮಂದಿಗೆ ಮೊದಲ ರ‍್ಯಾಂಕ್..!
ಈ ಬಾರಿಯ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಬರೋಬ್ಬರಿ ೬೭ ವಿದ್ಯಾರ್ಥಿಗಳು ೭೨೦ಕ್ಕೆ ೭೨೦ ಅಂಕಗಳನ್ನು ಗಳಿಸಿ ಮೊದಲ ರ‍್ಯಾಂಕ್ ಪಡೆದಿರುವುದು ಅಚ್ಚರಿಗೆ ಕಾರಣ. ಆ ಪೈಕಿ ೭ ಅಭ್ಯರ್ಥಿಗಳು ಒಂದೇ ಕೇಂದ್ರದವರಾಗಿರುವುದು ಅನುಮಾನ ಹೆಚ್ಚಿಸಿದೆ. ಈ ಮುನ್ನ ಸಾಮಾನ್ಯವಾಗಿ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುತ್ತಿದ್ದುದು ವಾಡಿಕೆ. ಆದರೆ,
ಒಂದೇ ತೆರನಾದ ರೋಲ್ ನಂಬರ್..!
ಅಖಿಲ ಭಾರತ ಮಟ್ಟದಲ್ಲಿ ೬೨ರಿಂದ ೬೯ನೇ ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿಗಳ ರೋಲ್ ನಂಬರ್‌ಗಳು ಬಹುತೇಕ ಒಂದೇ ರೀತಿಯಲ್ಲಿದ್ದು ಅಷ್ಟೂ ಮಂದಿ ಹರಿಯಾಣದವರಾಗಿದ್ದಾರೆ. ಮೂಲಗಳ ಪ್ರಕಾರ ಈ ೯ ಅಭ್ಯರ್ಥಿಗಳು ಒಂದೇ ಪರೀಕ್ಷಾ ಕೇಂದ್ರದ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.
೭೧೮/೭೧೯ ರ‍್ಯಾಂಕ್
ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಭೌತಶಾಸ್ತç, ಜೀವಶಾಸ್ತç, ರಸಾಯನಶಾಸ್ತçದಲ್ಲಿ ತಲಾ ೮೦ ಪ್ರಶ್ನೆಗಳಂತೆ ಒಟ್ಟು ೨೪೦ ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ ನಾಲ್ಕು ಅಂಕಗಳಿರುತ್ತವೆ. ಪ್ರತಿ ತಪ್ಪಿಗೆ ಐದು ಅಂಕ ಕಡಿತವಾಗುತ್ತದೆ. ಆದರೆ, ಈ ಬಾರಿಯ ಫಲಿತಾಂಶದಲ್ಲಿ ಕೆಲ ವಿದ್ಯಾರ್ಥಿಗಳಿಗೆ ೭೧೯, ೭೧೮ ಅಂಕಗಳನ್ನು ನೀಡಿದ್ದು ನೀಟ್ ಪರೀಕ್ಷಾ ಪದ್ಧತಿ ಪ್ರಕಾರ ಅದು ಅಸಾಧ್ಯವಾಗಿರುವುದರಿಂದ ಅಕ್ರಮದ ಸುಳಿವು ನೀಡಿದೆ.
ಅವಧಿಗೂ ಮುನ್ನ ಫಲಿತಾಂಶ..: ಈ ಸಲ ಜೂನ್ ೧೪ರಂದು ಫಲಿಶಾಂಶ ಪ್ರಕಟಣೆಯ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತಾದರೂ ಹತ್ತು ದಿನಗಳ ಮುಂಚೆಯೇ ಲೋಕಸಭಾ ಚುನಾವಣಾ ಫಲಿತಾಂಶದ ದಿನವೇ ಜೂನ್ ೪ರಂದು ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಅಕ್ರಮದಿಂದ ಬಚಾವಾಗಲು ಈ ಕ್ರಮ ಎಂಬ ಆರೋಪ ಕೇಳಿಬಂದಿದೆ.
ಗ್ರೇಸ್ ಮಾರ್ಕ್ಸ ನೀಡಿಕೆ: ನೀಟ್ ಪರೀಕ್ಷಾ ಪದ್ಧತಿ ಪ್ರಕಾರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವ ನಿಯಮಾವಳಿಯೇ ಇಲ್ಲ. ಹಾಗಿದ್ದೂ ಎರಡು ಸೆಟ್ ಪ್ರಶ್ನೆಪತ್ರಿಕೆ ವಿತರಿಸಿದ ಕಾರಣ ೪೫ ನಿಮಿಷ ತಡವಾಗಿ ಪರೀಕ್ಷಾ ಆರಂಭಿಸಿದ ಕಾರಣಕ್ಕಾಗಿ ಆ ವಿದ್ಯಾರ್ಥಿಗಳಿಗೆ ೨೪೦ ಅಂಕಗಳನ್ನು ನೀಡಲಾಗಿದ್ದು ಅವರೆಲ್ಲರೂ ರ‍್ಯಾಂಕ್ ಪಟ್ಟಿಯಲ್ಲಿ ಅಗ್ರರಾಗಿದ್ದಾರೆ ಎಂಬ ಆರೋಪವಿದೆ.

ಏನಿದು ವಿವಾದ..?
ಮೇ ೫ರಂದು ನಡೆದ ನೀಟ್ ಪರೀಕ್ಷೆಗೂ ಮುನ್ನ ಹರಿಯಾಣ ಸೇರಿದಂತೆ ಉತ್ತರಭಾರತದ ಹಲವೆಡೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸುದ್ದಿ ಹೊರಬಿದ್ದಿತ್ತು. ಪರೀಕ್ಷೆಯ ಮರುದಿನವೇ ಎನ್‌ಟಿಎ ಈ ಕುರಿತು ಸ್ಪಷ್ಟನೆ ನೀಡಿತ್ತಾದರೂ ಸೋರಿಕೆಯಾದ ಪ್ರಶ್ನೆಪತ್ರಿಕೆಗಳಿಗೂ ವಿದ್ಯಾರ್ಥಿಗಳಿಗೆ ಹಂಚಲಾದ ಪ್ರಶ್ನೆಪತ್ರಿಕೆಗಳಿಗೂ ಹಲವು ಸಾಮ್ಯಗಳಿದ್ದವೆನ್ನಲಾಗಿದೆ. ಪರೀಕ್ಷಾ ದಿನ ರಾಜಸ್ಥಾನದ ಕೇಂದ್ರವೊಂದರಲ್ಲಿ ಉತ್ತರ ಗುರುತಿಸಿರುವ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಆನಂತರ ವಾಪಸ್ ಪಡೆಯಲಾಯಿತೆನ್ನಲಾಗಿದೆ. ಈ ಕೇಂದ್ರದ ೧೨೦ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಯಿತೆಂದು ಎನ್‌ಟಿಎ ಸಮಜಾಯಿಷಿ ನೀಡಿದೆಯಾದರೂ ಅದು ಅನುಮಾನಾಸ್ಪದವೆನಿಸಿದೆ.

ಕೃಪಾಂಕ ಹಗರಣ ತನಿಖೆ
ನವದೆಹಲಿ: ನೀಟ್-ಯುಜಿ ಮೆಡಿಕಲ್ ಪರೀಕ್ಷೆಯಲ್ಲಿ ೧೫೦೦ ಜನರಿಗೆ ಕೃಪಾಂಕ ನೀಡಿರುವ ಬಗ್ಗೆ ತನಿಖೆ ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ೪ ಜನ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ವರದಿಯ ಆಧಾರದ ಮೇಲೆ ಮರು ಪರೀಕ್ಷೆ ಅಗತ್ಯವೇ ಇಲ್ಲವೆ ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ.