ನೀಟ್ ಪರೀಕ್ಷೆ ನೀಟಾಗಿಲ್ಲ ಮರು ಪರಿಶೀಲನೆ ಅಗತ್ಯ

ಸಂಪಾದಕೀಯ
Advertisement

ರಾಜ್ಯ ಪಠ್ಯಕ್ರಮ-ಕೇಂದ್ರೀಯ ಪಠ್ಯಕ್ರಮ ಎಂದು ಬೇರೆ ಇರುವಾಗ `ನೀಟ್’ಪರೀಕ್ಷೆಗೆ ಅರ್ಥವಿಲ್ಲ. ರಾಷ್ಟçಮಟ್ಟದಲ್ಲಿ ಒಂದೇ ಪರೀಕ್ಷೆಯ ಮೂಲಕ ಮೆರಿಟ್ ಗುರುತಿಸುವುದು ಕಷ್ಟ.

ವೈದ್ಯಕೀಯ ಕ್ಷೇತ್ರ ಪ್ರವೇಶಿಸಲು ಬಯಸುವವರು ಈಗ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆ ತೆಗೆದುಕೊಳ್ಳುವುದು ಅನಿವಾರ್ಯ. ಕೇಂದ್ರ ಸರ್ಕಾರದ ಈ ಪದ್ಧತಿಗೆ ಹಲವು ರಾಜ್ಯ ಸರ್ಕಾರಗಳ ತೀವ್ರ ವಿರೋಧವಿದೆ. ಅದರಲ್ಲೂ ತಮಿಳುನಾಡು ಇದನ್ನು ವಿರೋಧಿಸಿ ಪ್ರತ್ಯೇಕ ವಿಧೇಯಕವನ್ನು ಅಂಗೀಕರಿಸಿದೆ. ಇದಕ್ಕೆ ರಾಜ್ಯಪಾಲರು ಅನುಮೋದನೆ ನೀಡಿಲ್ಲ. ಇಡೀ ತಮಿಳುನಾಡಿನಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ತಮಿಳುನಾಡಿನ ಜನರಿಗೆ ಸಂಕುಚಿತ ಪ್ರಾದೇಶಿಕ ಮನೋಭಾವ ಇದೆ ಎಂದು ಸುಲಭವಾಗಿ ಹೇಳಿ ಇದನ್ನು ತಳ್ಳಿ ಹಾಕಬಹುದು. ಆದರೆ ಅಲ್ಲಿಯ ಜನ ಇಡೀ ದೇಶದ ಮುಂದೆ ಇಟ್ಟಿರುವ ಪ್ರಶ್ನೆ ಚಿಂತನಾರ್ಹ. ಸಂವಿಧಾನ ಶಿಕ್ಷಣ ರಂಗವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಜಂಟಿಯಾಗಿ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ಶಿಕ್ಷಣ ರಂಗದಲ್ಲಿ ಬದಲಾವಣೆ ತರಬೇಕಾದರೂ ರಾಜ್ಯ ಸರ್ಕಾರಗಳ ಒಪ್ಪಿಗೆ ಪಡೆಯುವುದು ಅಗತ್ಯ. ನೀಟ್ ಪರೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಸುವುದಕ್ಕೆ ಯಾರ ವಿರೋಧ ಇಲ್ಲ. ಆದರೆ ವೈದ್ಯಕೀಯ ರಂಗಕ್ಕೆ ಪ್ರವೇಶಿಸಲು ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯಲೇ ಬೇಕು ಎಂದು ಕಡ್ಡಾಯ ಮಾಡಿರುವುದು ವಿರೋಧಕ್ಕೆ ಕಾರಣವಿದೆ. ಹಿಂದೆ ಅಖಿಲ ಭಾರತ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲೂ ಪರೀಕ್ಷೆಗಳಿದ್ದವು. ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಸಿಗುತ್ತಿತ್ತು. ಉಳಿದವರು ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ಪಡೆಯುತ್ತಿದ್ದರು. ಈಗ ಎಲ್ಲರೂ ನೀಟ್ ಪರೀಕ್ಷೆ ಮೂಲಕವೇ ಪ್ರವೇಶ ಪಡೆಯಬೇಕೆಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ನೀಟ್ ಪರೀಕ್ಷೆಯನ್ನು ವಿರೋಧಿಸಲು ಕೆಲವು ಸಕಾರಣಗಳಿವೆ. ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್‌ಇ) ಆಧಾರವಾಗಿಟ್ಟುಕೊಂಡು ರಚಿಸಲಾಗುವುದು. ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳಿಗೆ ಕೆಲವು ವಿಷಯಗಳು ಪಠ್ಯಕ್ರಮಗಳಲ್ಲಿ ಇರುವುದೇ ಇಲ್ಲ. ಹೀಗಾಗಿ ಅವರಿಗೆ ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯುವುದು ಕಷ್ಟವಾಗುತ್ತದೆ. ಮೆರಿಟ್ ಎನ್ನುವುದು ಎಲ್ಲರಿಗೂ ಒಂದೇ ಎಂದು ಹೇಳುವುದು ಸುಲಭ. ಆದರೆ ದಿಲ್ಲಿಯಲ್ಲಿ ಓದುವ ಮಗುವಿಗೆ ಸಿಗುವ ಅಧ್ಯಯನ ವಿಶಾಲ ಅವಕಾಶ, ಹಳ್ಳಿಯಲ್ಲಿ ಓದುವ ಮಗುವಿಗೆ ಸಿಗುವುದಿಲ್ಲ. ಇದರರ್ಥ ಹಳ್ಳಿ ಮಗುವಿಗೆ ಹೆಚ್ಚು ಬುದ್ಧಿಮತ್ತೆ ಇಲ್ಲ ಎಂದರ್ಥವಲ್ಲ. ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಅವಕಾಶ ಲಭಿಸಿದಾಗ ಮಾತ್ರ ನೀಟ್ ಪರೀಕ್ಷೆಗೆ ಅರ್ಥ ಬರುತ್ತದೆ. ಅಲ್ಲಿಯವರೆಗೆ ರಾಜ್ಯಮಟ್ಟದಲ್ಲಿ ನೀಟ್ ಪರೀಕ್ಷೆ ನಡೆಸುವುದು ಅನಿವಾರ್ಯ. ಇದನ್ನೇ ತಮಿಳುನಾಡು ಸರ್ಕಾರ ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕೂಡ ಒಂದು ಸರ್ಕಾರ ಮಾತ್ರ. ಅದಕ್ಕೆ ಯಾವ ರೀತಿಯಲ್ಲೂ ಸರ್ವಾಧಿಕಾರಿ ಧೋರಣೆ ತಳೆಯಲು ಬರುವುದಿಲ್ಲ. ಹಣಕಾಸು ಮತ್ತು ಕಾನೂನು ಪರಿಪಾಲನೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ಇರುವಾಗ ಶಿಕ್ಷಣದಲ್ಲೂ ಕೇಂದ್ರ ಎಲ್ಲ ರಾಜ್ಯ ಸರ್ಕಾರಗಳ ಸಮ್ಮತಿಯೊಂದಿಗೆ ಕೆಲಸ ಮಾಡುವುದು ಅಗತ್ಯ. ಯಾವುದೇ ರೀತಿಯಲ್ಲ ಹೇರಿಕೆಯನ್ನು ರಾಜ್ಯ ಸರ್ಕಾರಗಳು ಒಪ್ಪುವುದಿಲ್ಲ. ಹಿಂದೆ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಹೇರಲು ಯತ್ನಿಸಿ ವಿಫಲಗೊಂಡಿತು. ಹೊಸ ಶಿಕ್ಷಣ ನೀತಿ ಕೂಡ ಇದೇ ಕಷ್ಟಗಳನ್ನು ಎದುರಿಸುತ್ತಿದೆ. ತ್ರಿಭಾಷಾ ಸೂತ್ರದಿಂದ ಹಿಡಿದು ಎಲ್ಲವೂ ಒಕ್ಕೂಟ ವ್ಯವಸ್ಥೆಯಲ್ಲಿ ಸಮಸ್ಯೆಗಳಾಗುತ್ತಿವೆ. ಅದರಲ್ಲೂ ಶಿಕ್ಷಣ ಬಹಳ ಸೂಕ್ಷ್ಮಮವಾದ ವಿಷಯ. ಮಾತೃಭಾಷೆಯಲ್ಲೇ ಶಿಕ್ಷಣ ನಡೆಯಬೇಕೆಂಬ ಸಂಗತಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಎಲ್ಲವೂ ಕೇಂದ್ರ-ರಾಜ್ಯಗಳ ನಡುವೆ ಸಮನ್ವಯ ಸಾಧಿಸಿಕೊಂಡೇ ಜಾರಿಗ ತರಬೇಕು. ಮೆರಿಟ್ ಎನ್ನುವುದು ಅಖಿಲ ಭಾರತ ಮಟ್ಟದಲ್ಲೇ ತೀರ್ಮಾನವಾಗಬೇಕು ಎಂಬ ಭಾವನೆಯೇ ತಪ್ಪು. ರಾಜ್ಯ ಮಟ್ಟದಲ್ಲೂ ಮೆರಿಟ್ ಗುರುತಿಸುವುದು ಅಗತ್ಯ.
ನಮ್ಮಲ್ಲಿ ವೈದ್ಯರ ಸಂಖ್ಯೆ ಬಹಳ ಕಡಿಮೆ ಇದೆ. ಪ್ರತಿ ೧ ಸಾವಿರ ಜನರಿಗೆ ಒಬ್ಬ ವೈದ್ಯ ಬೇಕು. ಅದರೆ ಒಂದೂವರೆ ಜನರಿಗೆ ಒಬ್ಬ ವೈದ್ಯನನ್ನು ಕಾಣುವುದು ಕಷ್ಟವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ವೈದ್ಯರು ಮುಂದೆ ಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆ ನಡೆಸಿ ವೈದ್ಯರನ್ನು ತಯಾರು ಮಾಡುತ್ತೇವೆ ಎಂದರೆ ಗ್ರಾಮೀಣ ಜನರ ಪರಿಸ್ಥಿತಿ ಏನು?