ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

Advertisement

ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಆಮ್‌ ಆದ್ಮಿ ಪಕ್ಷ ತೊರೆದು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ಅವರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಭಾಸ್ಕರ್ ರಾವ್ ಜೊತೆ ಅವರ ಬೆಂಬಲಿಗರು ಬಿಜೆಪಿ ಸೇರಿದರು.
ನಂತರ ಮಾತನಾಡಿದ ಭಾಸ್ಕರ್‌ ರಾವ್‌, ಎಎಪಿ‌ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಅದು ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಬಿಜೆಪಿ ಸೇರಿದ್ದೇನೆ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು. ನನ್ನ ವಯಸ್ಸನ್ನು ವೇಸ್ಟ್ ಮಾಡದೇ ಬಿಜೆಪಿ ಸೇರಬೇಕೆಂದು ಪಕ್ಷಕ್ಕೆ ಬಂದಿದ್ದೇನೆ. ಎಲ್ಲೆಲ್ಲಿ ನನ್ನ ಅವಶ್ಯಕತೆ ಇದೆ, ಅಲ್ಲಿ ನಾನು ತೊಡಗಿಸಿಕೊಂಡು ಕೆಲಸ ಮಾಡುತ್ತೇನೆ. ಭಾರತ ಸಮೃದ್ಧವಾಗಿ ಗಟ್ಟಿಯಾಗಬೇಕು. ಬಿಜೆಪಿಯಿಂದ ಮಾತ್ರ ಅದು ಸಾಧ್ಯ. ಬೇರೆ ಯಾವ ಪಕ್ಷಗಳಿಂದಲೂ ಸಾಧ್ಯವಿಲ್ಲ. ಇಲ್ಲಿ ಸಿಗುವ ಅವಕಾಶ ನೋಡಿ ಖುಷಿ ಆಗುತ್ತದೆ. ರಾಜ್ಯದ ನಾಯಕರ ಮಾರ್ಗದರ್ಶನದಲ್ಲಿ ಏನೇ ಕೆಲಸ ಕೊಟ್ರು ಮಾಡಿಕೊಂಡು ಹೋಗ್ತೀನಿ. ಇಲ್ಲಿ ಅತ್ಯಂತ ಅನುಭವಿ ರಾಜಕಾರಣಿಗಳು ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಭಾಸ್ಕರ್ ರಾವ್ ಅವರು ನಿವೃತ್ತಿ ನಂತರ ಆಪ್ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ. ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ. ಅವರ ಆಡಳಿತಾತ್ಮಕ ಅನುಭವಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆ. ಅವರಿಗೆ ಪಕ್ಷದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.