ನಿವೃತ್ತ ಉಪನೋಂದಣಾಧಿಕಾರಿ ಶಾಂತಯ್ಯ ನಿಧನ

ಉಪನೋಂದಣಾಧಿಕಾರಿ
Advertisement

ಹೊನ್ನಾವರ: ಸಬ್ ರಜಿಸ್ಟಾರ್ ಕಚೇರಿಯಲ್ಲಿ ಓರ್ವ ಪ್ರಾಮಾಣಿಕ ಅಧಿಕಾರಿಯಾಗಿ ತನ್ನ ವಿಭಿನ್ನ ವ್ಯಕ್ತಿತ್ವ ಮತ್ತು ತನ್ನ ವಿಶಿಷ್ಟ ಸಹಿಯಿಂದಾಗಿ ಪ್ರಸಿದ್ಧಿ ಪಡೆದಿದ್ದ ಹೊನ್ನಾವರದ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಂಬಾಳ ಗ್ರಾಮದ ನಿವಾಸಿ ನಿವೃತ್ತ ಉಪನೊಂದಣಾಧಿಕಾರಿ ಶಾಂತಯ್ಯ ಬುಧವಾರ ನಿಧನರಾದರು. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೆಲ ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಕೇವಲ 61 ವರ್ಷದ ಕೆ.ಎಸ್. ಶಾಂತಯ್ಯ ಅವರು ಹೊನ್ನಾವರದ ಸಬ್ ರಜಿಸ್ಟಾರ್ ಆಗಿ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ತಾಲೂಕಿನ ಜನರ ಮತ್ತು ಸರ್ಕಾರಿ ನೌಕರರ ಪ್ರೀತಿಗಳಿಸಿ ಅದ್ದೂರಿಯಾಗಿ ಬೀಳ್ಕೊಡುಗೆಯನ್ನು ತಾಲೂಕಿನ ಜನರಿಂದ ಪಡೆದುಕೊಂಡಿದ್ದರು.
ತನ್ನ ಸಹಿಯನ್ನು ಯಾರೇ ನಕಲು ಮಾಡಲಾಗದಂತೆ ಬಳ್ಳಿ-ಬಳ್ಳಿಯಾಗಿ ಬಹಳ ವಿಶಿಷ್ಟವಾಗಿ ಸಹಿ ಮಾಡುತ್ತಿದ್ದರು. ಅವರ ಪ್ರತಿ ಸಹಿಗೂ ಒಂದು ನಿಮಿಷಗಳ ಕಾಲ ತೆಗೆದುಕೊಳ್ಳುತ್ತಿದ್ದರು. ತಮ್ಮ ಸಹಿಯ ವಿಶಿಷ್ಟತೆಯಿಂದ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಗಮನ ಸೆಳೆದಿದ್ದರು. ಹಲವಾರು ದಾಖಲೆಗಳಲ್ಲಿ ಸ್ಥಾನ ಪಡೆದಿದ್ದರು. ಕಚೇರಿಗೆ ಬಂದವರನ್ನು ಪ್ರೀತಿಯಿಂದ ಗೌರವದಿಂದ ನಡೆಸಿಕೊಳ್ಳುತ್ತಿದ್ದ ಅವರು ತುಮಕೂರು ಸಿದ್ಧಗಂಗಾ ಮಠದ ಶಿಷ್ಯರಾಗಿ ಬಸವ ತತ್ವವನ್ನು ಪಾಲಿಸುತ್ತಿದ್ದರು. ನುಡಿದಂತೆ ನಡೆದ ಅವರು ವಾಗ್ದಾನ ಮಾಡಿದಂತೆ ತಮ್ಮ ಕಣ್ಣುಗಳನ್ನೂ ದಾನ ಮಾಡಿ ಮರಣದಲ್ಲಿಯೂ ಇನ್ನೊಬ್ಬರ ಬದುಕಿಗೆ ದಾರಿ ದೀಪವಾಗಿದ್ದಾರೆ.
ಗುರುವಾರ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅವರ ಸ್ವಗ್ರಾಮದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಶಾಂತಯ್ಯ