ನಿಲ್ಲದ ಅಕ್ರಮ ಮಾವಾ ಮಾರಾಟ

ಮಾವಾ
Advertisement

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಅಕ್ರಮವಾಗಿ ಎಗ್ಗಿಲದೆ ತಂಬಾಕು ಮಿಶ್ರಿತ ಮಾವಾ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದರೂ ಕೇಳುವವರೇ ಇಲ್ಲ..!ಪಾನ್‌ಶಾಪ್ ಅಂಗಡಿಗಳ ಮುಂದೆ ನಿತ್ಯ ನೂರಾರು ಮಾವಾ ಪಾಕೆಟ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
ಇಲ್ಲಿನ ತಾಲೂಕಾ ಕೇಂದ್ರ ಸ್ಥಳ ರಬಕವಿ-ಬನಹಟ್ಟಿಯಲ್ಲಿಯೇ ರಾಜಾರೋಷವಾಗಿ ಮಾವಾ ಮಾರಾಟ ನಡೆಯುತ್ತಿದ್ದರೂ ಯಾರು ಕೇಳಬೇಕು ಎನ್ನುತ್ತಿದ್ದಾರೆ ನಾಗರಿಕರು.ಕೆಲ ತಿಂಗಳ ಹಿಂದೆ ಪೊಲೀಸ್ ಇಲಾಖೆ ಹಾಗು ಆಹಾರ ಇಲಾಖೆ ಜಂಟಿಯಾಗಿ ಮಾವಾತಯಾರು ಮಾಡುವ ಘಟಕಗಳಿಗೆ ಹಾಗು ಅಂಗಡಿಗಳ ಮೇಲೆ ದಾಳ ನಡೆಸಿ ಹಲವು ಪ್ರಕರಣ ದಾಖಲಿಸಿ ಶಿಸ್ತಿನ ಕ್ರಮಕ್ಕೆ ಮುಂದಾಗಿತ್ತು. ಆದರೆ ಇದೀಗ ಮತ್ತೆ ಅದು ತಲೆಯೆತ್ತಿ ನಿಂತಿದ್ದರೂ ಕೇಳುವವರಿಲ್ಲದಂತಾಗಿ ದಿನಕ್ಕೊಂದು ಮಾವಾ ಅಂಗಡಿ ತೆರೆಯುವಂತಾಗಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.
ರಫ್ತು
ಅನಧಿಕೃತವಾಗಿ ಸರ್ಕಾರದ ಮಾನ್ಯತೆ ಪಡೆಯದೆ ಅಕ್ರಮವಾಗಿ ಮಾವಾ ಪಾಕೆಟ್‌ಗಳನ್ನು ಒಂದು ಲೇಬಲ್ ಅಡಿಯಲ್ಲಿ ವಿಜಯಪುರ, ಬಾಗಲಕೋಟೆ ಹಾಗು ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ರಾಜಾರೋಷ ರಫ್ತುಮಾಡುತ್ತಿದ್ದು, ಮರ‍್ನಾಲ್ಕು ಮಾವಾ ಘಟಕಗಳು ರಬಕವಿ-ಬನಹಟ್ಟಿಯಲ್ಲಿ ನೆಲೆಯೂರಿರುವದು ಅಧಿಕಾರಿಗಳ ಗಮನಕ್ಕಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿರುವದು ಸಂಶಯಕ್ಕೆಡೆ ಮಾಡಿದೆ.ತಕ್ಷಣವೇ ಅಂತಹ ಅಕ್ರಮ ಅಡ್ಡೆಗಳ ಮೇಲೆ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.