ನಿಮಗೂ ಇದೆಯೇ ಉಗುರು ಕಚ್ಚುವ ಅಭ್ಯಾಸ..?

Advertisement

ಪ್ರಶ್ನೆ: ನನ್ನ ಗೆಳತಿಗೆ ೧೬ ವರ್ಷ ಅವಳಿಗೆ ಉಗುರು ಕಚ್ಚುವ ಹವ್ಯಾಸವಿದೆ, ಕ್ಲಾಸಿನಲ್ಲಿದ್ದಾಗ, ಹೊರಗೆ ತಿರುಗಾಡುವಾಗ, ಮಾರುಕಟ್ಟೆಯಲ್ಲಿರಲಿ, ಸಿನಿಮಾ ಮಂದಿರದಲ್ಲಿರಲಿ ಎಲ್ಲೇ ಇರಲಿ, ಆಗಾಗ ಕೈ ಬಾಯಲ್ಲಿಟ್ಟು ಉಗುರು ಕಚ್ಚುತ್ತಿರುತ್ತಾಳೆ. ಎಷ್ಟೋ ಬಾರಿ ಟೀಚರ್ ಹತ್ತಿರ ಬೈಸಿಕೊಂಡಿದ್ದಾಳೆ. ಎಷ್ಟು ಹೇಳಿದರು ಕೇಳುವುದಿಲ್ಲ ಇದಕ್ಕೆ ಏನು ಮಾಡಬೇಕು? ಉಗುರು ಕಚ್ಚುವುದು ಬಿಡಿಸುವುದು ಹೇಗೆ? ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇನೆ.
ಉತ್ತರ: ನಿಮ್ಮ ಗೆಳತಿಗೆ ಯಾವುದೋ ವಿಷಯದ ಬಗ್ಗೆ ಆತಂಕ ಕಾಡುತ್ತಿರಬಹುದು. ಕೆಲವು ವಿಚಾರಗಳಲ್ಲಿ ಇತರರಿಗಿಂತ ತಾನು ಕಡಿಮೆ ಎಂಬ ಭಾವನೆ ಬಂದಿರಬಹುದು ಆತಂಕ ಕೀಳರಿಮೆಯಿಂದ ಉಗುರು ಕಚ್ಚುವುದನ್ನು ಆರಂಭಿಸಿರಬಹುದು, ನಂತರ ಅದು ಹಾಗೆ ರೂಢಿಯಾಗಿದೆ ಅಂತ ಅನಿಸುತ್ತದೆ. ಅವಳಿಗೆ ಕೌನ್ಸಲಿಂಗ್ ಅಗತ್ಯ ಇದೆ ನೀವು ಅವಳು ಉಗುರು ಕಚ್ಚುವುದನ್ನು ಗಮನಿಸಿದ್ದಲ್ಲಿ ಬೈದು ಕೈ ತೆಗೆಯಲು ಹೇಳಿ, ಯಾರಾದರೂ ಹೇಳುತ್ತಿರಬೇಕು ಹೇಳದಿದ್ದರೆ ಅದು ಹಾಗೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ಒಮ್ಮೆ ಮನೋವೈದ್ಯರ ಬಳಿ ಕರೆದೊಯ್ದು ಕೌನ್ಸಲಿಂಗ್ ಕೊಡಿಸಿ ಯೋಗ, ಧ್ಯಾನ, ಪುಸ್ತಕಗಳನ್ನು ಓದುವುದು, ಸಂಗೀತ, ಕೇಳುವುದು ಮುಂತಾದ ಹವ್ಯಾಸಗಳನ್ನು ಅಳವಡಿಸಿಕೊಂಡಲ್ಲಿ ಅದು ತನ್ನಿಂದ ತಾನೇ ಮರೆಯಾಗುತ್ತದೆ.

ಪ್ರಶ್ನೆ: ನನಗೆ ೧೭ ವರ್ಷ. ನನಗೆ ಹಲ್ಲು ಉಬ್ಬು ಇದೆ. ಹಲ್ಲುಗಳ ಮಧ್ಯೆ ಅಂತರವಿದೆ ಎಲ್ಲೊರೊಡನೆ ನಗುವುದಕ್ಕೆ ಆಗುವುದಿಲ್ಲ, ನನ್ನ ಹಲ್ಲನ್ನು ನೋಡಿ ತಮಾಷೆ ಮಾಡಿ ನಗುತ್ತಾರೆ ಅಂತ ಅನಿಸುತ್ತಿರುತ್ತದೆ. ಹಲ್ಲು ಸರಿಪಡಿಸಿಕೊಳ್ಳಲು ಆಗುವುದೇ? ಅದಕ್ಕೆ ಏನು ಮಾಡಬೇಕು? ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.
ಉತ್ತರ: ಹಲ್ಲಿನ ಆಕಾರ, ದೃಢತೆ ಅನುವಂಶಿಯವಾಗಿ ಬರುತ್ತದೆ. ಉಬ್ಬು ಹಲ್ಲನ್ನು ಸರಿಪಡಿಸಿಕೊಳ್ಳಬಹುದು. ನಿಮಗೆ ೧೮ ತುಂಬುವವರೆಗೆ ಕಾಯಬೇಕು. ಆ ನಂತರ ದಂತ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆಯ ವಿವರ ಪಡೆದುಕೊಳ್ಳಿ ಆರ್ಥೋಡೆಂಟಿಕ್ಸ್ನಲ್ಲಿ ಪರಿಣಿತಿ ಹೊಂದಿದವರು ಈ ಚಿಕಿತ್ಸೆ ನೀಡುತ್ತಾರೆ. ದೀರ್ಘಕಾಲದ ಚಿಕಿತ್ಸೆ ಬೇಕಾಗುತ್ತದೆ. ಹಲ್ಲಿನ ಮಧ್ಯ ಇರುವ ಅಂತರವನ್ನು ಕ್ಲಿಪ್‌ನಿಂದ ಕಡಿಮೆ ಮಾಡಬಹುದು ಪರೀಕ್ಷೆ ಮುಗಿದ ನಂತರ ೧೮ ವರ್ಷ ತುಂಬಿದ ಮೇಲೆ ಹತ್ತಿರದಲ್ಲಿರುವ ದಂತ ವೈದ್ಯರನ್ನು ಭೇಟಿಯಾಗಿ. ದಂತ ವೈದ್ಯಕೀಯದಲ್ಲಿ ಆರ್ಥೋಡೆಂಟಿಕ್ಸ್ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ ಎನಿಸಿದರೆ ಸರ್ಕಾರಿ ದಂತ ವೈದ್ಯಕೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ.

ಪ್ರಶ್ನೆ: ನನ್ನ ಗೆಳತಿಗೆ ೧೬ ವರ್ಷ. ಅವಳಿಗೆ ಅಕ್ಕಿ ತಿನ್ನುವ ಅಭ್ಯಾಸವಿದೆ. ದಿನಕ್ಕೆ ಒಂದೆರಡು ಬಾರಿಯಾದರೂ ಅವರ ಅಮ್ಮನಿಗೆ ತಿಳಿಯದಂತೆ ಅಕ್ಕಿ ತಿನ್ನುತ್ತಾಳೆ. ಅಕ್ಕಿ ತಿಂದರೆ ಏನಾದರು ತೊಂದರೆ ಆಗುತ್ತದೆಯಾ? ಯಾಕೆ ಹಾಗೆ ಅಕ್ಕಿ ತಿನ್ನುತ್ತಾಳೆ. ಅದನ್ನು ನಿಲ್ಲಿಸಲು ಔಷಧಿ ಇದೆಯಾ? ಅದೇ ರೀತಿ ಶಾಲೆಯಲ್ಲಿ ಯಾರಿಗೂ ಕಾಣದಂತೆ ಚಾಕ್‌ಪೀಸ್ ಪುಡಿಯನ್ನು ನೆಕ್ಕಿಬಿಡುತ್ತಾಳೆ. ಅವಳಿಗೆ ಯಾವ ಔಷಧಿ ಕೊಡಿಸಬೇಕು.
ಉತ್ತರ: ದೇಹದಲ್ಲಿ ಸುಣ್ಣಾಂಶ ಮತ್ತು ಜೀವ ಸತ್ವಗಳ ಕೊರತೆಯಾದಲ್ಲಿ ಈ ರೀತಿ ಅಕ್ಕಿ, ಚಾಕ್‌ಪೀಸ್ ಪುಡಿ, ವಿಭೂತಿ ತಿನ್ನಬೇಕೆನಿಸುತ್ತದೆ. ನಿಮ್ಮ ಗೆಳತಿಗೆ ರಾಗಿಯನ್ನು ಹೆಚ್ಚು ಆಹಾರದಲ್ಲಿ ಸೇವಿಸಲು ಹೇಳಬೇಕು. ಹಾಲು, ಮೊಟ್ಟೆ, ಮೊಳಕೆ ಕಾಳು, ಮೊಸರು, ತುಪ್ಪ ಸೇವಿಸಲು ಹೇಳಿ. ದೇಹದಲ್ಲಿ ಸುಣ್ಣಾಂಶದ ನ್ಯೂನತೆ ಸರಿಯಾದ ಮೇಲೆ ಅಕ್ಕಿ ತಿನ್ನುವುದನ್ನು ಬಿಟ್ಟುಬಿಡುತ್ತಾರೆ.ಜಂತು ಹುಳುಗಳಿದ್ದಲ್ಲಿ ವಿಡಂಗಾರಿಷ್ಟವನ್ನು ದಿನಕ್ಕೆರಡು ಬಾರಿ ಒಂದು ಚಮಚದಷ್ಟನ್ನು ನೀರಿನಲ್ಲಿ ಬೆರೆಸಿ ಊಟದ ನಂತರ ಕುಡಿಯಲು ಹೇಳಿ. ಕ್ರಮೇಣ ಅಕ್ಕಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತಾ ಬರುತ್ತದೆ. ಶಂಖಭಸ್ಮವನ್ನು ಎರಡು ಚಿಟಿಕೆಯಷ್ಟು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು. ಶಂಖಭಸ್ಮ ಆಯುರ್ವೇದ ಔಷಧಿ ಅಂಗಡಿಯಲ್ಲಿ ದೊರೆಯುತ್ತದೆ.

ಪ್ರಶ್ನೆ: ನನಗೆ ೧೮ ವರ್ಷ. ನನಗೆ ಎದೆ ಭಾಗದಲ್ಲಿ ದಪ್ಪಗಿದೆ ಹುಡುಗಿಯರಿಗೆ ಬರುವ ಹಾಗೆ ಸ್ತನಗಳು ಸ್ವಲ್ಪ ಉಬ್ಬಿರುವಂತೆ ಕಾಣುತ್ತದೆ. ಓಡಾಡಲು ನಾಚಿಕೆ ಎನಿಸುತ್ತದೆ. ಯಾವಾಗಲೂ ಬನಿಯನ್ ಶರ್ಟ್ ಹಾಕಿಕೊಂಡೇ ಇರುತ್ತೇನೆ. ಗೆಳೆಯರೆಲ್ಲ ತಮಾಷೆ ಮಾಡುತ್ತಿರುತ್ತಾರೆ. ಇದಕ್ಕೆ ಏನು ಮಾಡಬೇಕು? ಈ ವಿಷಯ ಸದಾ ಮನಸ್ಸಿನಲ್ಲಿ ಕೊರೆಯುತ್ತಿರುವುದರಿಂದ ಓದಲು ಆಗುತ್ತಿಲ್ಲ. ಇದಕ್ಕೇನು ಪರಿಹಾರ? ದಯವಿಟ್ಟು ಉತ್ತರಿಸಿ.
ಉತ್ತರ: ಕೆಲವರಲ್ಲಿ ಎದೆ ಭಾಗದಲ್ಲಿ ಕೊಬ್ಬು ಶೇಖರಣೆಯಾಗಿ ಸ್ತನಗಳು ಉಬ್ಬಿದಂತೆ ಕಾಣುತ್ತವೆ. ನೀವು ವ್ಯಾಯಾಮ ಮಾಡಿ ಅದನ್ನು ಕರಗಿಸಬಹುದು. ಅದರ ಬಗ್ಗೆ ಚಿಂತೆ ಬಿಡಿ. ನೀವು ಕಡಿಮೆ ಅವಧಿಯಲ್ಲಿ ದೇಹದ ತೂಕ ಹೆಚ್ಚಿಸಿಕೊಂಡಿದ್ದೀರಿ ಅನಿಸುತ್ತದೆ. ಆಹಾರದಲ್ಲಿ ಜಂಕ್ ಫುಡ್ ಕೊಬ್ಬಿದ ಆಹಾರ ಪದಾರ್ಥದ ಸೇವನೆ ಬೇಡ ಪೋಷಕಾಂಶ ಯುಕ್ತ ತರಕಾರಿ, ಸೊಪ್ಪು, ಹಣ್ಣುಗಳು, ಮೊಳಕೆ ಕಾಳು ಸೇವಿಸಿ. ಮೊಟ್ಟೆ ಸೇವಿಸುವುದಾದಲ್ಲಿ ಬಿಳಿ ಮಾತ್ರ ಸೇವಿಸಿ. ದಿನಕ್ಕೆ ಒಂದು ಗಂಟೆ ದೇಹವನ್ನು ಮೇಲ್ಭಾಗಕ್ಕೆ ಮಾಡುವ ವ್ಯಾಯಾಮ ಇಲ್ಲವೇ ಯೋಗಾಸನ ಮಾಡಿ. ದಿನಕ್ಕೆ ಎರಡುವರೆ ಲೀಟರ್ ನೀರು ಕುಡಿಯಿರಿ. ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಿ. ವಿರೇಚನ ಚಿಕಿತ್ಸೆ ತೆಗೆದುಕೊಳ್ಳಿ. ಎಂಟು ಗಂಟೆ ನಿದ್ರೆ ಮಾಡಿ. ನಿದ್ರೆ ಸರಿಯಾಗದಿದ್ದರೂ ದೇಹದ ತೂಕ ಹೆಚ್ಚಾಗುತ್ತದೆ.