ಮೈಸೂರು: ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ಶಾಸಕ ಜಿ.ಟಿ ದೇವೇಗೌಡ ತಾತ್ಸಾರದ ಉತ್ತರ ನೀಡಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ನಿರಂತರ ಮಳೆಯಿಂದಾಗಿ ಜನ ಹೈರಾಣಾಗಿ ಹೋಗಿದ್ದು, ಮಹಿಳೆಯೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಕಾರು ನಿಲ್ಲಿಸಿ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದಾರೆ.
ಈ ವೇಳೆ ಸಚಿವರು ಜಿಲ್ಲಾಧಿಕಾರಿ ಇದ್ದಾರೆ ಹೋಗಮ್ಮ, ಅಲ್ಲಿ ಹೋಗು ಎಂದು ತಾತ್ಸಾರದ ಉತ್ತರ ನೀಡಿ ಶಾಸಕ ಜಿ.ಟಿ ದೇವೇಗೌಡ ಅವರ ಬಳಿಗೆ ಕಳುಹಿಸಿದ್ದಾರೆ.
ಬಳಿಕ ಜಿ.ಟಿ ದೇವೇಗೌಡರ ಬಳಿ ಬಂದ ಮಹಿಳೆ ಸರ್, ನಮ್ಮ ಮನೆಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ನೀವು ಬಂದು ನೋಡಿ, ನಾವು ಜೀವನ ಮಾಡುವುದು ಹೆಂಗೆ, ನಾವು ಇರಬೇಕಾ ಬೇಡವಾ..? ಹೀಗೆ ಆದರೆ ನಾವು ಸಾಯಬೇಕಾಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಜಿ.ಟಿ ದೇವೇಗೌಡ ಅವರು ಕೂಡ ಉಡಾಫೆ ಉತ್ತರ ನೀಡಿದ್ದು, ಹೋಗಮ್ಮ ಇದು ನಿನ್ನದೊಬ್ಬಳ ಸಮಸ್ಯೆ ಅಲ್ಲ. ಎಲ್ಲಾ ಕಡೆನೂ ಇದೇ ಸಮಸ್ಯೆ ಹೋಗು ಎಂದು ಕಳುಹಿಸಿದ್ದಾರೆ ಎನ್ನಲಾಗಿದೆ. ಜನಪ್ರತಿನಿಧಿಗಳು ತಮ್ಮ ಸಮಸ್ಯೆ ಸ್ಪಂದಿಸದ ಕಾರಣ ಮಹಿಳೆ ಕಣ್ಣೀರಿಡುತ್ತಲೇ ವಾಪಸ್ ಆಗಿದ್ದಾರೆ.