ನಿನ್ನೆ ಆರಂಭಗೊಂಡ ಗಣೇಶ ವಿಸರ್ಜನೆ ಮೆರವಣಿಗೆ ಇನ್ನೂ ಮುಗಿದಿಲ್ಲ

Advertisement

ಬೆಳಗಾವಿ: ಗಡಿನಾಡ ಬೆಳಗಾವಿಯ ಅದ್ದೂರಿ ಗಣೇಶ ವಿಸರ್ಜನಾ ಮೆರವಣಿಗೆ ಬರೊಬ್ಬರಿ 30 ತಾಸಿಗೂ ಹೆಚ್ಚು ಕಾಲ ನಡೆಯಿತು. ಶುಕ್ರವಾರ ರಾತ್ರಿ 9ಗಂಟೆಯಾದರೂ ಇನ್ನೂ 5 ಗಣಪತಿ ವಿಸರ್ಜನೆ ಬಾಕಿ ಉಳಿದಿದ್ದವು. ಖಡಕ ಗಲ್ಲಿ, ಚವಾಟ ಗಲ್ಲಿ, ಅನಗೋಳ ಭಾಗದ ಗಣಪತಿ ಮೂರ್ತಿಗಳು ಶುಕ್ರವಾರ ತಡರಾತ್ರಿ ವಿಸರ್ಜನೆಯಾದವು. ಅಧಿಕಾರಿಗಳು ಪರಿಪರಿಯಾಗಿ ಬೇಡಿಕೊಂಡರೂ ವಿಸರ್ಜನೆಗೆ ಮಂಡಳಗಳು ವಿಳಂಬ ಮಾಡಿದವು.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಎಲ್ಲ ಮಂಡಗಳಗಳು ಗಣೇಶನನ್ನು ಹೊಂಡದ ಬಳಿ ತಂದರೂ ಕೂಡ ವಿಸರ್ಜನೆಗೆ ಯಾರೂ ಮುಂದಾಗಲಿಲ್ಲ. ಉದ್ದೇಶ ಪೂರ್ವಕವಾಗಿ ಪೂಜೆ
ಸಲ್ಲಿಸುವ ನೆಪದಲ್ಲಿ ಸಮಯ ಕಳೆಯುವ ಕೆಲಸವನ್ನು ಮಂಡಳದವರು ಮಾಡುತ್ತಿದ್ದರು.
ಕಳೆದ ದಿನ ಸಂಜೆ ೪ಕ್ಕೆ ನರಗುಂದಕರ ಭಾವೇ ಚೌಕ್‌ದಿಂದ ಆರಂಭಗೊಂಡ ಮೆರವಣಿಗೆ ಶುಕ್ರವಾರ ಸಂಜೆ 8.30 ಆದರೂ ಮುಕ್ತಾಯವಾಗಿರಲಿಲ್ಲ. ಒಟ್ಟಾರೆ ೩೦ ತಾಸಿಗೂ ಹೆಚ್ಚು ಕಾಲ ಗಣಪತಿ ವಿಸರ್ಜನೆಗೆ ತೆಗೆದುಕೊಂಡಿರುವುದು ವಿಶೇಷ. ಶುಕ್ರವಾರ ಮಧ್ಯ ರಾತ್ರಿ ಕೊನೆಯ ಗಣೇಶನನ್ನು ವಿಸರ್ಜನೆ ಮಾಡುವುದರ ಮೂಲಕ ಬೆಳಗಾವಿ ಗಣೇಶ ವಿಸರ್ಜನಾ ಮೆರವಣಿಗೆ ದಾಖಲೆ ಮಾಡಿದಂತಾಗಿದೆ.
ಗುರುವಾರ ರಾತ್ರಿ ಹನ್ನೊಂದರ ನಂತರ ಮೆರವಣಿಗೆಯಲ್ಲಿ ಡಿಜೆಗಳ ಅಬ್ಬರ ಇರಲಿಲ್ಲ. ಆಗ ಕೇವಲ ಲೇಜಿಮ್, ಜಾಂಜ್ ಪಥಕಗಳ ಸದ್ದು ಕೇಳಿ ಬರುತ್ತಿತ್ತು. ಅಷ್ಟೇ ಅಲ್ಲ ಕೆಲವೊಂದು ಮಂಡಳಗಳ ಮುಂದೆ ಪೊಲೀಸರು ಸೂಚಿಸಿದಂತೆ ಮ್ಯೂಜಿಕ್ ಹಚ್ಚಲಾಗಿತ್ತು.
ಆದರೆ ಸಮಯ ಹೆಚ್ಚಾದಂತೆ ಮ್ಯೂಜಿಕ್ ಸಿಸ್ಟಮ್‌ಗಳ ಅಬ್ಬರ ಹೆಚ್ಚಾದವು. ಕ್ಯಾಂಪ್ ಮತ್ತು ಟಿಳಕವಾಡಿ ಸೇರಿದಂತೆ ಇನ್ನಿತರ ಮಂಡಳಗಳ ಗಣೇಶ ಮೂರ್ತಿಗಳು ಬಂದ ಸಂದರ್ಭದಲ್ಲಿ ಡಿಜೆಗಳ ಅಬ್ಬರ ಹೆಚ್ಚಾಗಿತ್ತು. ಸಮಯ ಮೀರುತ್ತಿದ್ದಂತೆ ಹಾಡಿಗೆ ತಕ್ಕಂತೆ ಹುಚ್ಚೆದ್ದು ಕುಣಿಯುವವರ ಸಂಖ್ಯೆ ಕೂಡ ಹೆಚ್ಚಾಯಿತು.