ಕುಂಭಕರ್ಣನ ಬಳಿ ತೆರಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಅವನು ಬಿಟ್ಟ ಉಸುರಿಗೆ ಎಲ್ಲರೂ ಸತ್ತು ಹೋಗುತ್ತಿದ್ದರು. ರಾವಣನ ಆಜ್ಞೆಯಂತೆ ಅಯುತಸಂಖ್ಯೆಯಲ್ಲಿ ರಾಕ್ಷಸರು ತೆರಳಿ ಕುಂಭಕರ್ಣನನ್ನು ಅನೇಕ ಆಯುಧಗಳನ್ನು ಪ್ರಯೋಗ ಮಾಡಿ ಎಬ್ಬಿಸಿದರು.
ಎದ್ದ ಕುಂಭಕರ್ಣನಿಗೆ ಒಂದು ಬೆಟ್ಟದಷ್ಟು ಮಾಂಸವನ್ನು ರಕ್ತದ ಸರೋವರಗಳನ್ನು ಸಿದ್ಧಪಡಿಸಿದರು. ಹೊಟ್ಟೆಬಿರಿ ತಿಂದು ತೃಪ್ತನಾದ ಕುಂಭಕರ್ಣನನ್ನು ರಾವಣನು ಕರೆಯಿಸಿ, ಓ ಪ್ರೀತಿಯ ತಮ್ಮನೇ ಯುದ್ಧದಲ್ಲಿ ನಾನು ಒಬ್ಬ ಸಾಮಾನ್ಯ ಮನುಷ್ಯನಾದ ರಾಮನಿಂದ ಪರಾಜಿತನಾಗಿದ್ದೇನೆ. ನೀನು ಅವನನ್ನು ಕೊಂಡು ಬಾ ನನಗೆ ಸಂತೋಷವನ್ನುಂಟು ಮಾಡು ಎಂದು ಹೇಳಿದನು.
ರಾವಣನ ಮಾತನ್ನು ಕೇಳಿದ ಕುಂಭಕರ್ಣನು ತಲೆಯ ಮೇಲೆ ಕೈಯಿಟ್ಟು ಅಣ್ಣನ ವಿಚಾರವನ್ನು ನಿರಾಕರಿಸಿದ. ಅಂಥ ಶ್ರೇಷ್ಠ ಪರಾಕ್ರಮಿಯಾದ ರಾಮನೊಡನೆ ನೀನೇಕೆ ವೈರತ್ವ ಕಟ್ಟಿಕೊಂಡೆ. ಮಾಡಬಾರದ ಕಾರ್ಯಕ್ಕೆ ಕೈ ಹಾಕಿಯಿರುವಿಯಲ್ಲ ಎಂದು ಉಪದೇಶಿಸಿದ. ಅದಕ್ಕೆ ಉತ್ತರಿಸಿದ ರಾವಣನು ನಾನು ಏನೇ ತಪ್ಪು ಮಾಡಿದ್ದರು. ನನ್ನನ್ನು ರಕ್ಷಿಸುವ ಜವಾಬ್ದಾರಿ ನಿನಗೆ ಇದ್ದೇ ಇದೆ. ಆದ್ದರಿಂದ ಯುದ್ಧಕ್ಕೆ ಹೊರಟು ಅವನನ್ನು ಸೋಲಿಸಿ ಬಾ ಎಂದು ಹೇಳಿದನು.
ಕುಂಭಕರ್ಣನು ಅಣ್ಣನ ಮಾತಿನಂತೆ ಯುದ್ಧಕ್ಕೆ ಹೊರಟು ನಿಂತನು. ಐದು ಯೋಜನ ಎತ್ತರವಿರುವ ಕೋಟೆಯ ಗೋಡೆಯನ್ನು ದಾಟಿ ಕುಂಭಕರ್ಣನು ರಣರಂಗದಲ್ಲಿ ಕಾಲಿಟ್ಟನು. ಇವನ ರೂಪವನ್ನು ಕಂಡ ಎಲ್ಲ ಕಪಿವೀರರೂ ಕಟ್ಟಿದ ಸೇತುವೆಯನ್ನೇ ದಾಟಿ ಓಡಿ ಹೋದರು. ನಿಋತಿಯ ಅವತಾರನಾದ ದುರ್ಮುಖನನ್ನು ಮರುತ್ತುಗಣಗಳಲ್ಲಿ ಹಿರಿಯನಾದ ಕೇಸರಿ ಎಂಬುವನನ್ನು ಕುಂಭಕರ್ಣನು ಉಂಡೆಯಂತೆ ಬಾಯಿಯೊಳಗೆ ಹಾಕಿಕೊಂಡನು.
ಕುಮುದನನ್ನು, ಜಯಂತನನ್ನು ಕೈಯಿಂದಲೇ ಹೊಸಕಿದನು. ನಲ, ಗಜ ಮೊದಲಾದವರನ್ನು ಮುಷ್ಟಿಯನ್ನು ತಾಕಿಸಿಯೇ ಕೆಳಗೆ ಬೀಳಿಸಿದನು. ಅಂಗದ ಜಾಂಬವಂತ ಸುಗ್ರೀವ ಮೊದಲಾದವರು ದೊಡ್ಡ ವೃಕ್ಷಗಳನ್ನೂ ಪರ್ವತಗಳನ್ನೂ ಹಿಡಿದು ಯುದ್ಧಕ್ಕೆ ಮುನ್ನುಗ್ಗಿದರು.
ಆ ಪರ್ವತಗಳೆಲ್ಲವೂ ಕುಂಭಕರ್ಣನ ಮೈಗೆ ತಾಗಿ ಪುಡಿಪುಡಿಯಾದವು, ಕುಂಭಕರ್ಣನಿಗೆ ಏನೂ ಆಗಲಿಲ್ಲ. ಸುಗ್ರೀವನು ಹಿನ್ನೆಡೆಯದೇ ಮತ್ತೊಂದು ಪರ್ವತವನ್ನು ಎತ್ತಿಕೊಂಡು ರಾಕ್ಷಸನ ಮೇಲೆ ಎಸೆದಾಗ ಕುಂಭಕರ್ಣನು ಅದನ್ನು ಹಿಡಿದುಕೊಂಡು ಸುಗ್ರೀವನಿಗೆ ಪ್ರತಿಯಾಗಿ ಹೊಡೆದನು. ಅದರ ಏಟಿಗೆ ಸುಗ್ರೀವನು ನೆಲದ ಮೇಲೆ ಬಿದ್ದು ಹೋದನು.
ಅದೇ ಸಂದರ್ಭದಲ್ಲಿ ಅಂಗದ ಜಾಂಬವಂತರನ್ನು ಕೂಡ ಹೊಡೆದು ಹಾಕಿದನು. ಬಿದ್ದ ಸುಗ್ರೀವನನ್ನು ಹಿಡಿದುಕೊಂಡು ಕುಂಭಕರ್ಣನು ಅರಮನೆಯ ಕಡೆ ಹೊರಟೇ ಬಿಟ್ಟನು. ಹನುಮಂತ ಇದನ್ನು ನೋಡುತ್ತಾ ನೊಣದಷ್ಟ್ಟು ಸೂಕ್ಷ್ಮ ರೂಪವನ್ನು ಧರಿಸಿ ಅವನ ಹಿಂದೆ ನಡೆದನು. ಕುಂಭಕರ್ಣನ ಯುದ್ಧವನ್ನು ಕಂಡು ಎಲ್ಲ ಬಂಧುಗಳು ಜಯಕಾರ ಹಾಕಿದರು. ಎಲ್ಲರಿಂದಲೂ ಮಾನ್ಯನಾದನು. ಕುಂಭಕರ್ಣನ ಮೇಲೆ ತಂಪಾದ ನೀರನ್ನು ಹೂಮಾಲೆಗಳನ್ನು ಸುರಿಸಿದರು. ಅದು ಸುಗ್ರೀವನ ಮೇಲೆಯೂ ಬಿದ್ದು ಆಯಾಸವನ್ನು ಪರಿಹಾರ ಮಾಡಿಕೊಂಡನು. ಸುಗ್ರೀವನು ಕುಂಭಕರ್ಣನ ಕೈಯಿಂದ ತಪ್ಪಿಸಿಕೊಂಡು ಅವನ ಮೂಗನ್ನೇ ಕಚ್ಚಿಬಿಟ್ಟನು. ಕಿವಿಗಳನ್ನು ಹಲ್ಲುಗಳಿಂದ ಚೆನ್ನಾಗಿ ಕಚ್ಚಿ ಮೇಲೆ ಹಾರಿದನು.
ಸಿಟ್ಟುಗೊಂಡ ಕುಂಭಕರ್ಣನು ಒಮ್ಮೆ ಕೈಬೀಸಿ ಸುಗ್ರೀವನಿಗೆ ಅಪ್ಪಳಿಸಿದಾಗ ಮೂರ್ಛ ತಪ್ಪಿ ಕೆಳಗೆ ಬಿದ್ದನು. ಪುನಃ ಕಾಲಿನಿಂದ ಹೊಸಕಿದನು. ಅವನ ಕಾಲುಬೆರಳುಗಳ ಸಂದಿಗಳಿಂದಲೇ ಸುಗ್ರೀವನು ಹಾರಿದನು. ಆದರೆ, ಆ ರಾಕ್ಷಸನು ಶೂಲದಿಂದಲೇ ತಿವಿದುಬಿಟ್ಟನು. ಇದನ್ನು ಕಂಡ ಹನುಮಂತನು ಜೋರಾಗಿ ಗರ್ಜನೆ ಮಾಡಿದನು.
ಹನುಮಂತನನ್ನು ಕಂಡ ಕುಂಭಕರ್ಣನು ಮುಷ್ಟಿಯಿಂದ ಹನುಮಂತನ ಎದೆಗೆ ಹೊಡೆದಾಗ ಅದರಿಂದ ವಿಚಲಿತನಾಗದ ಹನುಮಂತನು ಪುನಃ ಕುಂಭಕರ್ಣನನ್ನೇ ಹೊಡೆದನು. ಹನುಮಂತನ ಏಟಿಗೆ ಕುಂಭಕರ್ಣನು ಮೂರ್ಛಿತನಾಗಿ ತನಗೆ ಜಯಕಾರ ಹಾಕುತ್ತಿರುವ ಬಂಧುಗಳ ನಡುವೆಯೇ ಕೆಳಗೆ ಬಿದ್ದನು. ಎಚ್ಚರವಾದ ಮೇಲೆ ಕುಂಭಕರ್ಣನು ಪುನಃ ಯುದ್ಧಕ್ಕಾಗಿ ರಾಮನಿರುವಲ್ಲಿಗೆ ತೆರಳಿದನು.