ಹುಬ್ಬಳ್ಳಿ: `ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ’ ಮೀಸಲಾತಿ ನೀಡಲು ಆಗ್ರಹಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಕೊನೆಯ ಹಂತದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೆ. 20ರಂದು ಬೆಳಗ್ಗೆ 9 ಗಂಟೆಗೆ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಎದುರು ಸಾಂಕೇತಿಕವಾಗಿ ಒಂದು ದಿನ ಧರಣಿ ಮಾಡಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಶಿಗ್ಗಾವಿಯ ಚೆನ್ನಮ್ಮ ವೃತ್ತದಿಂದ ಮುಖ್ಯಮಂತ್ರಿಯವರ ಮನೆಯವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು. 50 ಸಾವಿರದಿಂದ 1 ಲಕ್ಷಗಳವರೆಗೆ ಜನರು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಯವರಿಗೆ ಮೀಸಲಾತಿ ನೀಡಬೇಕು ಎಂದು ನಾಲ್ಕು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸರಕಾರ ಸ್ಪಂದಿಸಿಲ್ಲ. ಆದ್ದರಿಂದ ಸಿಎಂ ಮನೆಯ ಮುಂದೆ ಧರಣಿ ಮಾಡುತ್ತೇವೆ ಎಂದು ಗಡುವು ನೀಡಲಾಗಿತ್ತು. ಈಗ ಗಡುವು ಮುಗಿದಿದ್ದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.