ರಾಜ್ಯ ಸರ್ಕಾರವು ಏಳನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಮಾರ್ಚ್ 1ಕ್ಕೆ ಕೆಲಸಕ್ಕೆ ಗೈರಾಗಲು ಸರ್ಕಾರಿ ನೌಕರರು ಮುಂದಾಗಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ನಮ್ಮನ್ನು ಕೆಲಸದಿಂದ ವಜಾ ಮಾಡಲಿ, ಎಸ್ಮಾ ಜಾರಿಗೆ ತರಲಿ. ಆದರೆ, ನಾವು ಯಾವುದಕ್ಕೂ ಹೆದರುವುದಿಲ್ಲ. 7ನೇ ವೇತನ ಆಯೋಗ ಮತ್ತು ಒಪಿಎಸ್ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಫೆಬ್ರವರಿ 23ರಿಂದ 28ರವರೆಗೆ ಏಳು ದಿನಗಳ ಕಾಲ ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ಆದರೆ, 8 ದಿನಗಳಾದರೂ ಸರ್ಕಾರ ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ. ಹೀಗಾಗಿ, ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಅಲ್ಲದೇ ಕಳೆದ 9 ತಿಂಗಳಿನಿಂದಲೂ ಮನವಿ ಮಾಡುತ್ತಾ ಇದ್ದೇವೆ. ಇದು ಏಕಾಏಕಿ ನಿರ್ಧಾರವಲ್ಲ. ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.