ನಾಡಿಗೆ ಬರ, ರಾಜಕಾರಣಕ್ಕೆ ಮುಂಗಾರು

Advertisement

ಮುಂಗಾರು ಈಗ ಕೈಕೊಟ್ಟಿದೆ. ರಾಜ್ಯದ ಎಲ್ಲ ಜಲಾಶಯಗಳು ಬರಿದಾಗಿವೆ. ಬೀಜ ಬಿತ್ತನೆ ಮಾಡಬೇಡಿ ಎಂದು ಕಾವೇರಿ ಬೇಸಿನ್ ರೈತರಿಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ ಜಲಾನಯನ ಪ್ರದೇಶದಲ್ಲೂ ಇದೇ ಸ್ಥಿತಿ. ಈಗೀಗ ಕರಾವಳಿಯಲ್ಲಿ ಮಳೆ ಜೋರಾಗಿದ್ದರೂ ಒಂದು ತಿಂಗಳ ಕಾಲದ ವಿಳಂಬ ರೈತಾಪಿ ಜನರ ಬದುಕನ್ನು ಹೈರಾಣಾಗಿಸಿದೆ. ಇಷ್ಟರಲ್ಲೇ ಶೇಕಡಾ ೩೫ರಷ್ಟು ಪ್ರದೇಶ ಬಿತ್ತನೆಯಾಗಿ, ಮೊಳಕೆಯೊಡೆದು ಹಸಿರಾಗಬೇಕಿದ್ದ ಭೂಮಿ ಇನ್ನೂ ಒಣಗಿ ಬಿರುಕು ಬಿಟ್ಟು ಧೂಳು ಹಾರುತ್ತಿದೆ.
ಗ್ಯಾರಂಟಿಗಳ ಗದ್ದಲದಲ್ಲಿ ರಾಜ್ಯ ಸರ್ಕಾರ ಈ ಬರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ತತ್ಸಂಬಂಧ ಆಪತ್ತು ನಿರ್ವಹಣೆ ಕಾರ್ಯ ಕೈಗೊಳ್ಳಲು ಏಕೋ ಹಿಂದೇಟು ಹಾಕುತ್ತಿರುವಂತಿದೆ. ಇದರೊಟ್ಟಿಗೆ ಬರ'ರಾಜಕಾರಣವೂ ಆರಂಭವಾಗಿದೆ. ಕರ್ನಾಟಕಕ್ಕೆ ಅತಿವೃಷ್ಟಿ- ಅನಾವೃಷ್ಟಿ ಹೊಸದಲ್ಲ. ದೇಶದ ಅತಿ ಹೆಚ್ಚು ಕಾಲ ಬರ ಅನುಭವಿಸಿದ ಮತ್ತು ಬಂಜರು ಭೂಮಿ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಸಾಕಷ್ಟು ನದಿಗಳು ಹರಿಯುತ್ತಿದ್ದರೂ, ಪಶ್ಚಿಮ ಘಟ್ಟ ಅಡ್ಡಲಾಗಿ ಹಾದು ಹೋದರೂ, ದೇಶದ ಅರಣ್ಯ ಪ್ರಮಾಣದ ಪ್ರದೇಶಕ್ಕಿಂತ ಹೆಚ್ಚು ಕಾಡು ಇಲ್ಲಿದ್ದರೂ ಕರ್ನಾಟಕಕ್ಕೆ ಅನಾವೃಷ್ಟಿ ಬೆನ್ನುಬಿಡದ ನಂಟು. ಪ್ರಸ್ತುತ ಕರ್ನಾಟಕದಲ್ಲಿ ಶೇಕಡಾ ೭೧ರಷ್ಟು ಮಳೆ ಕೊರತೆ ಉಂಟಾಗಿದೆ. ಬಿಸಿ ಗಾಳಿ ಜೋರಾಗಿದೆ. ಮುಂಗಾರು ಮಳೆ ಜೂಜಾಟ ಆಡಿದಂತಾಗಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತನ್ನ ವರದಿಯನ್ನು ನೀಡಿದೆ. ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಕೃಷ್ಣರಾಜ ಸಾಗರ (ಕಾವೇರಿ) ಜಲಾಶಯದಲ್ಲಿ ಈಗ ಕನಿಷ್ಠ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರಿದೆ. ಎಪ್ಪತ್ನಾಲ್ಕು ಅಡಿಯಷ್ಟು ಮಾತ್ರ ನೀರಿರುವುದರಿಂದ, ಇದು ಕುಡಿಯುವ ನೀರಿನ ಸಂಬಂಧ ಕಾದಿರಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಈಗಿರುವುದು ಕೇವಲ ೪.೧ ಟಿಎಂಸಿಎಫ್‌ಟಿ. ಅಂದರೆ ಇಪ್ಪತೈದು ದಿನಕ್ಕೂ ಕೂಡ ಈ ನೀರು ಸಾಕಾಗುವುದಿಲ್ಲ. ಇದೇ ರೀತಿ ಜಲವಿದ್ಯುತ್ ಯೋಜನೆ ಜಲಾಶಯಗಳ ಸ್ಥಿತಿಯೂ ಕೂಡ. ಎಲ್ಲಕ್ಕೂ ಹೆಚ್ಚಾಗಿ ಇಡೀ ರಾಜ್ಯಾದ್ಯಂತ ಕುಡಿಯುವ ನೀರಿನ ಹಾಹಾಕಾರವೇ ಎದ್ದಿದೆ. ಕಲುಷಿತ ನೀರು ಮತ್ತು ನೀರಿನ ತುಟಾಗ್ರತೆಯಿಂದಾಗಿ ಈಗಾಗಲೇ ರಾಜ್ಯದಲ್ಲಿ ಹನ್ನೊಂದಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮುಂಗಾರು ನಂಬಿ ಸಾಲಸೋಲ ಮಾಡಿ ಬೀಜ ಖರೀದಿಸಿದ ರೈತ ಈ ಬರ ಪರಿಸ್ಥಿತಿಯಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಭವಿಷ್ಯತ್ತಿನಲ್ಲಿ ಆಹಾರ ಕೊರತೆಯ ಜೊತೆಗೆ, ಸಾಮಾಜಿಕ, ಆರ್ಥಿಕ, ಸಮಸ್ಯೆಯನ್ನು ಬೃಹದಾಕಾರವಾಗಿ ಎದುರಿಸಬೇಕಾಗಿದೆ. ಆದಾಗ್ಯೂ ಪ್ರಸ್ತುತ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವ ಸ್ಥಿತಿ ಇಲ್ಲ ಎಂದು ಕಂದಾಯ ಮಂತ್ರಿಗಳು ಷರಾ ಬರೆದಿದ್ದಾರೆ. ಏಕೆ ಹೀಗೆ? ಬಹುಶಃ ಈ ವಿಪತ್ತು ನಿರ್ವಹಣೆಯ ಆತಂಕ ಈಗಲೇ ಕಾಡಿದಂತಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಗ್ಯಾರಂಟಿಗಾಗಿ ಮೀಸಲಿಟ್ಟರೆ ವಿಪತ್ತು ನಿರ್ವಹಣೆಗೆ ಇನ್ನೆಲ್ಲಿಂದ ಹಣ ಹೊಂದಿಸುವುದು ಎನ್ನುವ ಆತಂಕ ಎದುರಾದಂತಿದೆಯೇನೋ? ಕರ್ನಾಟಕಕ್ಕೆ ಬರ ಹೊಸದೇನೂ ಅಲ್ಲ. ೨೦೦೧ ರಿಂದ ೨೦೧೯ ರವರೆಗೆ ಹನ್ನೊಂದು ವರ್ಷಗಳ ಕಾಲ ಬರ ಸ್ಥಿತಿ ಅನುಭವಿಸಿದ್ದರೆ ಮೂರು ವರ್ಷ ಅತಿವೃಷ್ಟಿಯಿಂದ ನಲುಗಿತು. ಸಾಮಾನ್ಯ ಮಳೆ, ಮುಂಗಾರು ಹವಾಮಾನ ಎಲ್ಲವನ್ನೂ ಕಂಡಿದ್ದು ಕೆಲವೇ ವರ್ಷ. ೧೯೮೫ರಲ್ಲಿ ಸತತ ಮೂರು ವರ್ಷಗಳ ಕಾಲ ಕರ್ನಾಟಕ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಕಾಂಗ್ರೆಸ್ಸೇತರ ಪ್ರಥಮ ಜನತಾ ಸರ್ಕಾರ ಮತ್ತು ಆಗಿನ ಸಚಿವರಾಗಿದ್ದ ನಜೀರ್‌ಸಾಬ್, ಬೈರೇಗೌಡ, ಎಸ್.ಆರ್.ಬೊಮ್ಮಾಯಿ, ದೇವೇಗೌಡ ಬರ ನಿರ್ವಹಣೆಗೆ ಹೊಸ ದಿಸೆಯನ್ನೇ ನೀಡಿದರು. ಬರವನ್ನು ಅವರು ಕಂಡ ಮತ್ತು ನಿರ್ವಹಿಸಿದ ರೀತಿ ದೇಶದಲ್ಲೇ ಮೆಚ್ಚುಗೆ ಪಡೆದಿತ್ತು. ಅನಾವೃಷ್ಟಿ ಕೇವಲ ಭೂಮಿಗಲ್ಲ. ಬೆಳೆಗಲ್ಲ. ಹತ್ತಾರು ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಹಾಗೂ ಹಲವು ವರ್ಷಗಳವರೆಗೆ ಇದು ಸೃಷ್ಟಿಸಲಿರುವುದರಿಂದ ಅದಕ್ಕಾಗಿಯೇ ಬರ ನೋಡುವ ದೃಷ್ಟಿಯನ್ನು ವಿಭಿನ್ನವಾಗಿಸಿದರು. ಹಾಗಾಗಿಯೇ ಒಣ ಭೂಮಿ ಬೇಸಾಯ, ಜನರಿಗೆ ಕೂಲಿ, ವಲಸೆ ನಿಯಂತ್ರಣ, ಜನ ಜಾನುವಾರುಗಳ ನಿರ್ವಹಣೆ, ಭೂ ಗರ್ಭದಲ್ಲಿ ನೀರಿನ ಉತ್ಪಾದನೆಗೆ ಆದ್ಯತೆ, ಕೆರೆ ಕೊತ್ತಲಗಳ ನಿರ್ಮಾಣ ಇತ್ಯಾದಿಗಳಿಗೆ ಪ್ರಾಶಸ್ತ್ಯ ನೀಡಲಾಯಿತು. ಜನರ ವಲಸೆ ನಿಯಂತ್ರಣಕ್ಕಾಗಿ ಅಗತ್ಯ ಇರಲಿ, ಇಲ್ಲದಿರಲಿ ಅದೇ ಊರಲ್ಲೇ ಕೆಲಸ ಕೊಡಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಜಾನುವಾರುಗಳ ರಕ್ಷಣೆಗಾಗಿ ಹೊರ ರಾಜ್ಯದಿಂದ ಮೇವು ಖರೀದಿಸಿ ಮೇವಿನ ಬ್ಯಾಂಕ್ ಆರಂಭಿಸಲಾಯಿತು. ಮಳೆಯಾಶ್ರಿತ ಬೆಳೆಗಳನ್ನು ಕಡಿಮೆ ಮಾಡಿ, ಎಷ್ಟೇ ಹವಾಮಾನ ವೈಪರಿತ್ಯವಾದರೂ ಕನಿಷ್ಠ ಉತ್ಪನ್ನ ದೊರೆಯುವ ಉತ್ಪನ್ನಗಳಿಗೆ ಆದ್ಯತೆ, ಆ ನಂತರ ನೀರಾವರಿ ಯೋಜನೆಗಳಿಗೆ ಪ್ರಾಧಾನ್ಯತೆ. ಆ ನಂತರವೇ ಶುರುವಾದದ್ದು ವಿಪತ್ತು ನಿರ್ವಹಣೆಗೆ ರಾಷ್ಟ್ರಮಟ್ಟದಲ್ಲಿ ನಿಧಿ ಸ್ಥಾಪನೆ, ರಾಷ್ಟ್ರೀಯ ವಿಪತ್ತು ನಿಧಿ ಮಾನದಂಡ ಇತ್ಯಾದಿಗಳು. ಕೇಂದ್ರ-ರಾಜ್ಯಗಳ ನೆರವು, ಸೆಸ್ ಆಕರಣೆ ಇತ್ಯಾದಿ ಕಲ್ಪನೆಗಳೂ ಬಂದವು. ದುರಂತ ಎಂದರೆ ಭ್ರಷ್ಟಾಚಾರ ಮುಂಬರುವ ವರ್ಷಗಳಲ್ಲಿ ಬರವನ್ನೂ ಬಿಡಲಿಲ್ಲ.ಬರ ಮತ್ತು ನೆರೆ ಯಾವುದೇ ಇದ್ದರೂ ಅದೊಂದು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಸುಗ್ಗಿ ಎನ್ನುವ ಮಾತು ಈಗಂತೂ ಜನಜನಿತವಾಯಿತು.
ಬರದ ನೆಪದಲ್ಲಿ ನೀಡುವ ಕಾಮಗಾರಿಗಳು, ಯೋಜನೆಗಳಲ್ಲಿ ಭ್ರಷ್ಟಾಚಾರದ ವಾಸನೆ ಬರಲಾರಂಭಿಸಿತು. ಅತಿವೃಷ್ಟಿಯ ನಿರ್ವಹಣೆಯಲ್ಲಿ ಹಣದ ಥೈಲಿ ಹೊಳೆಯಿತು. ಹಾಗಂತ ಇವ್ಯಾವುವೂ ಜನರಿಗೆ ತಲುಪಲೇ ಇಲ್ಲ. ಕೇವಲ ಅಧಿಕಾರಿಗಳ, ಗುತ್ತಿಗೆದಾರರ, ರಾಜಕಾರಣಿಗಳ ಕಿಸೆ ತುಂಬಿದವು. ಆಗದ ಕಾಮಗಾರಿಗಳಿಗೆ, ನೀಡದ ಪರಿಹಾರಗಳಿಗೆ ಖರ್ಚು ಬಿತ್ತು. ಜನ ಗುಳೆ ಹೋಗುವುದು ತಪ್ಪಲಿಲ್ಲ. ಅತಿವೃಷ್ಟಿಯಿಂದ ಕೊಚ್ಚಿ ಹೋಗುವುದು ನಿಲ್ಲಲಿಲ್ಲ.
ಬರದ ನಿರ್ವಹಣೆಗೆ ನೀಡುವ ಹಣ ಮಣ್ಣಿನಲ್ಲಿ, ಬಿಸಿಲಲ್ಲಿ ಕಳೆದು ಹೋದರೆ, ಅತಿವೃಷ್ಟಿಯ ಯೋಜನೆಗಳು ಅಳತೆಗೆ ಸಿಗದೇ ಮಂಗಮಾಯವಾದವು.
ಈಗೀಗ ಬರ ಮತ್ತು ಅತಿವೃಷ್ಟಿಯಿಂದ ರೈತರಿಗೆ ರಕ್ಷಣೆ ಒದಗಿಸಲು ಬೆಳೆ ವಿಮೆ, ಫಸಲ್ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಆರಂಭದಲ್ಲಿದ್ದ ಮಾನದಂಡಗಳು ಬದಲಾಗಿದ್ದರಿಂದ ಈಗ ಫಸಲ್ ಬಿಮಾ ಯೋಜನೆಯತ್ತ ಜನ ಆಕರ್ಷಿತರಾಗುತ್ತಿಲ್ಲ. ಏಕೆಂದರೆ ಕಂತು ಕಟ್ಟಿದ ಹಣವೂ ಮರಳಿ ಬರುವ ಗ್ಯಾರಂಟಿ ಇಲ್ಲ. ವಿಮಾ ಕಂಪನಿಗಳ ಉದ್ಧಾರಕ್ಕಾಗಿಯೇ ಈ ಫಸಲು ಬಿಮಾ ಯೋಜನೆ ಎಂಬುದು ಜಗಜ್ಜಾಹೀರಾಗಿರುವುದರಿಂದ, ಬಹುರಾಷ್ಟ್ರೀಯ ಕಂಪನಿಗಳು ಫಸಲ್ ಬಿಮಾ ಕಂಪನಿಗಳನ್ನು ಸೃಷ್ಟಿಸಿಕೊಂಡವು.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ಫೋಟೊದೊಂದಿಗೆ ಯೋಜನೆ ಅನುಷ್ಠಾನಗೊಳಿಸಿ ಎಂದು ನಿತ್ಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಸ್ಥಿತಿ ಬಂದಿದೆ. ಆ ಜಾಹೀರಾತಿನಲ್ಲಿ, ಫಸಲ್ ಬಿಮಾ ಕಳೆದ ಏಳು ವರ್ಷಗಳಲ್ಲಿ ಪರಿಹಾರ ನೀಡಿದ್ದು ೧.೩೬ಲಕ್ಷ ಕೋಟಿ ಎಂದು ಸಾರಿದೆ.
ಆದರೆ ಸಂಗ್ರಹವಾದ ಹಣವೆಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ರೈತರಿಂದ ಸಂಗ್ರಹವಾದ ವಿಮೆ ಕಂತು, ಕೇಂದ್ರ ರಾಜ್ಯ ಸರ್ಕಾರಗಳ ಷೇರು ಸೇರಿ ಕೊಟ್ಟ ಪರಿಹಾರಕ್ಕಿಂತ ಹತ್ತಾರು ಪಟ್ಟು ಅಧಿಕ. ಅಂದರೆ ವಿಮಾ ಕಂಪನಿಗಳು ಉದ್ಧಾರವಾದವು ಅಷ್ಟೇ. ರೈತರಿಗೆ ಮರಳಿ ಸಿಕ್ಕಿದ್ದು ತೃಣ ಮಾತ್ರ.
ಈ ಮಧ್ಯೆ ಆಪತ್ತು ನಿರ್ವಹಣಾ ನಿಧಿಗೆ ಹೊಸ ಮಾನದಂಡವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಆ ಪ್ರಕಾರ ಮೂರು ಕ್ಯಾಟಗರಿಗಳು ಹಾಗೂ ಹಂತವನ್ನು ಪ್ರಕಟಿಸಿದೆ. ಒಂದು ಸಾಮಾನ್ಯ ಆಪತ್ತು, ಮಧ್ಯಮ ಆಪತ್ತು ಮತ್ತು ತೀವ್ರ ಆಪತ್ತು. ಸಾಮಾನ್ಯ ಮತ್ತು ಮಧ್ಯಮ ಆಪತ್ತುಗಳಿಗೆ ಕೇಂದ್ರದಿಂದ ಆಪತ್ತು ನಿರ್ವಹಣೆ ಪರಿಹಾರವನ್ನು ಕೊಡಲಾಗುತ್ತಿಲ್ಲ. ತೀವ್ರ ಆಪತ್ತು ಉಂಟಾದಾಗ ಕೇಂದ್ರ ನೆರವಿನ ಹಸ್ತ ಚಾಚುತ್ತದೆ.
ಅನಾವೃಷ್ಟಿ- ಅತಿವೃಷ್ಟಿಯಾದಾಗ ಬೀಜ, ಗೊಬ್ಬರ ಮತ್ತು ಕೃಷಿ ಉಪಕರಣಗಳನ್ನು ರಿಯಾಯ್ತಿ ದರದಲ್ಲಿ ನೀಡಬೇಕು ಎನ್ನುವುದು ಜನ ಕಲ್ಯಾಣ ಬಯಸುವ ಸರ್ಕಾರಗಳ ಧೋರಣೆ. ಆದರೆ ಮೂಲ ಬೆಲೆಯನ್ನೇ ಜಾಸ್ತಿ ಮಾಡಿ, ಸಬ್ಸಿಡಿ ನಿಗದಿ ಮಾಡುವುದರಿಂದ ಲಾಭ ಪಡೆದವರು ಅದೇ ಬೀಜ ಗೊಬ್ಬರ ಕಂಪನಿಗಳೇ. ಎಲ್ಲ ಗೊಬ್ಬರ- ಬೀಜ ಕಂಪನಿಗಳೂ ಲಾಭದಲ್ಲಿವೆ. ಪಡೆದ ರೈತ ಮಾತ್ರ ನಷ್ಟ ಅನುಭವಿಸುತ್ತಿದ್ದಾನೆ.
ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಎಷ್ಟಿದೆ ಎಂದರೆ ರಾಜ್ಯದ ಹಲವು ಕೃಷಿ ಅಧಿಕಾರಿಗಳ ಮೇಲೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಾಗ ಸಿಕ್ಕಿದ್ದು ಕೋಟ್ಯಂತರ ಹಣ!
ಈ ಮಧ್ಯೆ ಬರ ರಾಜಕಾರಣ ಪ್ರಕೃತಿ ಮುನಿಸಿಗಿಂತ ಜೋರಾಗುತ್ತಿದೆ. ಅತಿವೃಷ್ಟಿಯಾದಾಗ ನೆರವು ನೀಡದ, ರಾಜ್ಯಕ್ಕೆ ಬಾರದ ಪ್ರಧಾನ ಮಂತ್ರಿಗಳು ಚುನಾವಣೆಯ ವೇಳೆ ವಾರಕ್ಕೊಮ್ಮೆ ಬರುತ್ತಿದ್ದಾರಲ್ಲ? ಎನ್ನುವ ಪ್ರಶ್ನೆ ಚುನಾವಣೆ ವಿಷಯವಾಗಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅತಿವೃಷ್ಟಿಯ ಪರಿಹಾರ ತೃಣ ಮಾತ್ರ ಬಂತು. ಕೇಂದ್ರ ಬರ ಅಧ್ಯಯನ, ಅತಿವೃಷ್ಟಿ ಅಧ್ಯಯನಕ್ಕೆ ತಂಡವನ್ನು ಕಳಿಸುತ್ತದೆ. ಸಮೀಕ್ಷೆ ನಡೆಸುತ್ತದೆ. ರಾಜ್ಯ ಮನವಿಯನ್ನು ಕೊಡುತ್ತದೆ. ಆದರೆ ಬರುವುದು ಅತ್ಯಲ್ಪ. ಆರೂವರೆ ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಪರಿಹಾರ ಕೋರಿದರೆ ನೀಡಿದರೆ ಕೇವಲ ೩೦೦, ೨೫೦ ಕೋಟಿ ಮಾತ್ರ!
ಪ್ರಸ್ತುತ ಪರಿಸ್ಥಿತಿ ನೋಡಿದರೆ ರಾಜ್ಯಕ್ಕೆ ಬರ ಗ್ಯಾರಂಟಿ. ಐದು ಗ್ಯಾರಂಟಿಗಳಲ್ಲಿ ಹೈರಾಣಾಗುತ್ತಿರುವ ರಾಜ್ಯ ಸರ್ಕಾರ ಬರ ನಿರ್ವಹಣೆಗೆ ತುರ್ತು ನಿಗಾ ವಹಿಸಲೇಬೇಕಾಗಿದೆ. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಇದ್ದಾಗಲೂ ಬರ ಬಂದಿತ್ತು. ಬರ ರಾಜಕಾರಣವೂ ನಡೆದಿತ್ತು.
ಸ್ವತಃ ಅವರೇ ಸ್ವಾತಂತ್ರ್ಯನಂತರ, ವಾಜಪೇಯಿ ಸರ್ಕಾರವೂ ಸೇರಿದಂತೆ ಯಾವ ಸರ್ಕಾರಗಳೂ, ಪ್ರಧಾನ ಮಂತ್ರಿಗಳೂ, ಇಂತಹ ಆಪತ್ತಿನಲ್ಲಿ ಈಗಿನ ಸರ್ಕಾರದಷ್ಟು (ಮೋದಿ ಸರ್ಕಾರದಷ್ಟು) ಕರ್ನಾಟಕವನ್ನು ನಿರ್ಲಕ್ಷ ಮಾಡಿರಲಿಲ್ಲ. ಅವಮಾನಿಸಿರಲಿಲ್ಲ ಎಂದು ಸಾರಿದ್ದರು.
ಈಗ ಮತ್ತೆ ಬರದ ಹೆಸರಿನಲ್ಲಿ ರಾಜಕಾರಣ ಶುರುವಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಬಿಜೆಪಿ ಸರ್ಕಾರವನ್ನು ತರದಿದ್ದರೆ ಕೇಂದ್ರದ ಅನುದಾನ, ನೆರವು ಬಾರದು ಎಂದು ಜೆ.ಪಿ.ನಡ್ಡಾ ಅವರ ಚುನಾವಣಾ ಭಾಷಣದ ತುಣುಕು, ಹಾಗೆಯೇ ಕೇಂದ್ರ ಗೃಹ ಸಚಿವರುಡಬಲ್ ಎಂಜಿನ್ ಸರ್ಕಾರ ಬಾರದಿದ್ದರೆ ಕರ್ನಾಟಕದ ಅಭಿವೃದ್ಧಿಗೆ ತೊಡಕು’ ಎಂದಿರುವುದನ್ನು ಹರಿಬಿಡಲಾಗುತ್ತಿದೆ. ಅದನ್ನೇ ರಾಜಕೀಯ ದಾಳವಾಗಿಸಿಕೊಂಡರೆ ಅಥವಾ ಅದೇ ಮನೋಭೂಮಿಕೆ ಮುಂದುವರಿದರೆ ಹೈರಾಣಾಗುವರು ಜನಸಾಮಾನ್ಯರು ಮಾತ್ರ.
ಈ ರಾಜಕಾರಣಕ್ಕೇನೂ ಬರವಿಲ್ಲ ಬಿಡಿ. ಬರ ಬಿದ್ದಷ್ಟೂ ರಾಜಕಾರಣಿಗಳಿಗೆ ಹುಲುಸು ಅಲ್ಲವೇ?
ಇದೆಲ್ಲದರ ನಡುವೆಯೂ ಜನಸಾಮಾನ್ಯರ ಗೋಳಿಗೆ ಸರ್ಕಾರ ಈಗಲೇ ಕಾರ್ಯಪ್ರವೃತ್ತವಾಗಲೇ
ಬೇಕಿರುವುದು ಸಂದರ್ಭದ ತುರ್ತು.