ನಾಡಕೀರ್ತಿ ಬೆಳಗಲು ಬದುಕು ತೈಲವಾಗಲಿ

ತಲೆಮಾರು
Advertisement

ಜೀವನದ ಹಾದಿಯಲ್ಲೆದುರಾಗುವ ಕಷ್ಟನಷ್ಟಗಳನ್ನೆಲ್ಲ ಅಲಕ್ಷಿಸಿ ದೇಶವನ್ನೇ ದೇವರೆಂದು ಭಾವಿಸಿ ತ್ಯಾಗದ ಔನ್ನತ್ಯವೇರುವುದು ಭಾರತೀಯರಿಗೆ ಹೊಸದೇನಲ್ಲ. ಭಗವಂತನ ಕೃಪೆಯಿಂದ ಸಂಪಾದಿಸಿದ ಪ್ರತಿಭೆಯನ್ನು ನಾಡಿನ ಏಳಿಗೆಗಾಗಿ ಸಮರ್ಪಿಸಿ ಕೃತಾರ್ಥರಾಗುವ ಸಂಪ್ರದಾಯಕ್ಕೆ ಸುದೀರ್ಘ ಇತಿಹಾಸವಿದೆ. ಬ್ರಿಟಿಷ್ ಸರಕಾರದ ಪರವಾಗಿ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದಾದ ಅವಕಾಶವನ್ನು ಕಾಲಿನಿಂದೊದ್ದು ಸಂಘರ್ಷಮಯ ಸ್ವಾತಂತ್ರ‍್ಯ ಸಮರದ ಸಂದರ್ಭದಲ್ಲಿ ನೆಲಕಚ್ಚಿ ಹೋರಾಡಿದ ಶಚೀಂದ್ರನಾಥ ಸನ್ಯಾಲ್ ಮತ್ತು ಸ್ವಾತಂತ್ರ‍್ಯಾನಂತರ ದೇಶದ ಗಡಿಯನ್ನು ರಕ್ಷಿಸುವ ಯೋಧರ ಬಲಿದಾನಕ್ಕೆ ಮನಮಿಡಿದು ಗೀತಗುಚ್ಛ ಸಮರ್ಪಿಸಿ ರಾಷ್ಟ್ರಭಕ್ತರಿಗೊಂದು ದಿವ್ಯಮಂತ್ರವಿತ್ತ ಕವಿ ಪ್ರದೀಪರು ಭಾರತೀಪೂಜೆಗೆಂದೇ ತೈಲವಾದ ಧ್ಯೇಯಜೀವಿಗಳು. ಭಿನ್ನ ಭಾವಗಳಲ್ಲಿ ಪ್ರಖರ ದೇಶಭಕ್ತಿಯನ್ನು ತುಂಬಿದ ಅವರ ಲೇಖನಿ ಸ್ವಂತಕ್ಕಾಗಿ ದುಡಿದದ್ದು ಶೂನ್ಯವೇ.
‘ನಾನು ಹೊರಬರುತ್ತಿರುವುದು ಆಂಗ್ಲ ಸಾಮ್ರಾಜ್ಯದ ಮರಣಶಾಸನ ಬರೆಯಲು. ಬ್ರಿಟಿಷ್ ಸರಕಾರದ ಕೊನೆಗಾಲ ಸಮೀಪಿಸುತ್ತಿದೆ. ಗಂಟುಮೂಟೆ ಕಟ್ಟಿ ಹೊರಡಲು ಸಿದ್ಧರಾಗಿ ಕೆಂಪಂಗಿಗಳೇ. ಬ್ರಿಟಿಷ್ ಸರಕಾರ ಜನಸಾಮಾನ್ಯರ ಮೇಲೆಸಗಿದ ಒಂದೊಂದು ದೌರ್ಜನ್ಯಕ್ಕೂ ತಕ್ಕ ಉತ್ತರ ಕೊಡದೆ ಭಾರತೀಯನಾದ ನಾನು ವಿರಮಿಸುವುದಿಲ್ಲ. ನನಗೆ ಜೀವದಾನ ನೀಡುವ ನಾಟಕವನ್ನು ಕೊನೆಗೊಳಿಸಿ. ಸಾಮರ್ಥ್ಯವಿದ್ದರೆ ಎದುರೆದುರು ಹೋರಾಡಿ’ ಎಂಬ ಪ್ರಖರ ಲೇಖನದಿಂದ ಆಂಗ್ಲ ಅಧಿಕಾರಿಗಳ ಬೆಂಡೆತ್ತಿದ ಶಚೀಂದ್ರನಾಥ ಸನ್ಯಾಲ್ ಸಶಸ್ತ್ರ ಕ್ರಾಂತಿಯ ನೀಲನಕಾಶೆ ರಚಿಸಿ ಯುವಮುಂದಾಳುಗಳನ್ನು ಸೃಷ್ಟಿಸಿದ ಅಪ್ರತಿಮ ಸಾಹಸಿ. ಭಾರತದ ಕ್ರಾಂತಿಚರಿತ್ರೆಯ ಮರೆಯಲಾಗದ ಮಾಣಿಕ್ಯವೆಂದೇ ಗುರುತಿಸಲ್ಪಡುವ ಸನ್ಯಾಲ್ ಜನಿಸಿದ್ದು ದೇವಭೂಮಿ ಕಾಶಿಯಲ್ಲಿ. ಅಪ್ಪ ಹರಿನಾಥ ಸನ್ಯಾಲರ ಪಾಠ ಹಾಗೂ ಅಮ್ಮ ಕ್ಷೀರಾಬ್ಧಿವಾಸಿನಿ ದೇವಿಯ ಸಂಸ್ಕಾರ ಮಗನಲ್ಲಿ ದೇಶಭಕ್ತಿಯ ಮೊಳಕೆಯೊಡೆಸಿತು. ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಸ್ವಾತಂತ್ರ‍್ಯ ಹೋರಾಟದತ್ತ ಆಕರ್ಷಿತರಾಗಿ ಇಪ್ಪತ್ತು ತುಂಬುವ ಮೊದಲೇ ವಾರಾಣಸಿಯಲ್ಲಿ ಅನುಶೀಲನಾ ಸಮಿತಿಯ ಘಟಕ ಸ್ಥಾಪಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿದ ಸನ್ಯಾಲ್, ರಾಸ್ ಬಿಹಾರಿ ಬೋಸರ ಸಂಪರ್ಕದಿಂದ ಪೂರ್ಣ ಪ್ರಮಾಣದ ಕ್ರಾಂತಿಕಾರಿಯಾಗಿ ಬದಲಾದರು. ವಿದೇಶಕೇಂದ್ರಿತ ಗದರ್ ಚಳವಳಿಯ ನೇತೃತ್ವ ವಹಿಸಿ, ಪ್ರಥಮ ಮಹಾಯುದ್ಧದ ಹೊತ್ತಿಗೆ ಭಾರತದ ಸ್ವಾತಂತ್ರ‍್ಯ ಘೋಷಿಸುವ ಮಹದಾಸೆಗೆ ಯಶಸ್ಸು ದಕ್ಕಲಿಲ್ಲ. ಬೋಸ್ ಜಪಾನ್‌ಗೆ ತೆರಳಿದ ಬಳಿಕ ದೇಶೀಯ ಹೋರಾಟವನ್ನು ಮುನ್ನಡೆಸಿದ ಶಚೀಂದ್ರರ ಮೇಲೆ ಸಹಜವಾಗಿಯೇ ಬ್ರಿಟಿಷ್ ಸರಕಾರದ ವಕ್ರದೃಷ್ಟಿ ಬಿತ್ತು. ರಾಜದ್ರೋಹ, ಆಡಳಿತ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಷಡ್ಯಂತ್ರದ ಆರೋಪ ಹೊರಿಸಿ ಜೀವಾವಧಿ ಶಿಕ್ಷೆಯೊಂದಿಗೆ ಅಂಡಮಾನ್ ಸೆಲ್ಯುಲರ್ ಜೈಲಿಗೆ ರವಾನೆಯಾದ ಸನ್ಯಾಲ್ ಅಲ್ಪಕಾಲದಲ್ಲೇ ಬಿಡುಗಡೆಗೊಂಡರು.
ಅಸಹಕಾರ ಚಳವಳಿಯ ತೀವ್ರತೆಗೆ ಬೆದರಿದ ಸರಕಾರವನ್ನು ಬಗ್ಗುಬಡಿಯುವ ಅವಕಾಶ ಕೈಚೆಲ್ಲಿದ ಗಾಂಧೀಜಿ ಕ್ರಮದಿಂದ ಬೇಸತ್ತು, ರಾಮಪ್ರಸಾದ ಬಿಸ್ಮಿಲ್ ಜೊತೆಗೂಡಿ ಸಶಸ್ತ್ರ ಕ್ರಾಂತಿಯ ಉದ್ದೇಶದಿಂದ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಸ್ಥಾಪಿಸಿದ ಸನ್ಯಾಲ್, ಬಳಿಕ ಹಿಂದಿರುಗಿ ನೋಡಲಿಲ್ಲ. ‘ಕ್ರಾಂತಿಕಾರಿ’ ಹೆಸರಿನ ಪ್ರಣಾಳಿಕೆ ಪ್ರಕಟಿಸಿ ಕ್ರಾಂತಿಯ ಉದ್ದೇಶ, ಸ್ವಾತಂತ್ರ‍್ಯ ಸಮರದಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ವಿವರಿಸಿದ ಸನ್ಯಾಲರೆಡೆ ನೂರಾರು ಯುವಕರು ಧಾವಿಸಿದರು. ಶಚೀಂದ್ರರ ಪ್ರಭಾವಕ್ಕೆ ಬೆದರಿದ ಸರಕಾರ ಉದ್ಯೋಗ, ಹಣದ ಆಮಿಷವೊಡ್ಡಲು ಪ್ರಯತ್ನಿಸಿದರೆ, ಇತ್ತ ಸನ್ಯಾಲರು ನೋಡನೋಡುತ್ತಿದ್ದಂತೆ ದೇಶದಾದ್ಯಂತ ಸಂಘಟನೆಯನ್ನು ವಿಸ್ತರಿಸಿದರು. ಸಂಘಟನಾತ್ಮಕ ಬೆಳವಣಿಗೆ ಹಾಗೂ ವ್ಯವಸ್ಥೆಯ ಅನುಕೂಲಕ್ಕಾಗಿ ಕಾಕೋರಿ ಕ್ರಾಂತಿ ನಡೆಸಿ ಲಂಡನ್ ಗದ್ದುಗೆಯೇ ನಡುಗುವಂತೆ ಮಾಡಿದ ಶಚೀಂದ್ರರ ತೆರೆಮರೆಯ ಕಾರ್ಯ ಸದಾ ಸ್ಮರಣೀಯ. ಭಗತ್ ಸಿಂಗ್, ಚಂದ್ರಶೇಖರ ಆಜಾದರಾದಿಯಾಗಿ ತರುಣ ನಾಯಕರಿಗೆ ಪ್ರೇರಣೆತುಂಬಿದ ಪುಣ್ಯಾತ್ಮ, ಉದ್ರೇಕಕಾರಿ ಭಾಷಣ ಹಾಗೂ ರಾಜದ್ರೋಹದ ಆಪಾದನೆಯ ಮೇರೆಗೆ ಎರಡನೆಯ ಕರಿನೀರಿನ ಶಿಕ್ಷೆಗೆ ಗುರಿಯಾಗಿ ಅಂಡಮಾನಿಗೆ ರವಾನೆಯಾದರು. ಈ ಅವಧಿಯಂತೂ ಸನ್ಯಾಲರ ಪಾಲಿಗೆ ಅಗ್ನಿಪರೀಕ್ಷೆ. ಒಂದೆಡೆ ಮನೆ ಜಪ್ತಿ, ಇನ್ನೊಂದೆಡೆ ಅಮಾನವೀಯ ಚಿತ್ರಹಿಂಸೆ. ನರಕಕ್ಕಿಂತಲೂ ಭೀಕರ ಶಿಕ್ಷೆಗೊಳಗಾದ ಶಚೀಂದ್ರರ ಶರೀರ ಸೊರಗಿ ಅಲ್ಪಕಾಲದಲ್ಲೇ ಕ್ಷಯರೋಗ ಆವರಿಸಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಡುಗಡೆಗೊಂಡರೂ ಸುಮ್ಮನಿರದ ದೇಶಭಕ್ತ ದ್ವಿತೀಯ ಮಹಾಯುದ್ಧದ ಸಂಧಿಕಾಲದಲ್ಲಿ ದಾಸ್ಯಮುಕ್ತಿಯ ಕನಸುಕಂಡು ಹೋರಾಟ ಮುಂದುವರಿಸಿದರು. ಸೆರೆವಾಸದ ಅನುಭವ ‘ಬಂಧಿ ಜೀವನ್’ ಪುಸ್ತಕ ಬರೆದು ಆಂದೋಲನಕ್ಕಾಗಿ ಬದುಕನ್ನೇ ಮುಡಿಪಿಟ್ಟ ಹೋರಾಟಗಾರರ ತ್ಯಾಗಪೂರ್ಣ ಜೀವನವನ್ನು ತೆರೆದಿಟ್ಟರು. ರೋಗದ ತೀವ್ರತೆಯನ್ನು ಲೆಕ್ಕಿಸದೆ ಭವಿಷ್ಯದ ಗೆಲುವನ್ನಷ್ಟೇ ಮನದಲ್ಲಿರಿಸಿ ಯುವಕರ ಪಡೆ ನಿರ್ಮಿಸಿದ ಸನ್ಯಾಲರು ಮತ್ತೆ ಎರಡು ಬಾರಿ ಬಂಧಿತರಾದರು. ಪ್ರತಿಬಾರಿಯೂ ಗರಿಕೆಯಂತೆ ಪುಟಿದೇಳುವ ವಿಶಿಷ್ಟ ವ್ಯಕ್ತಿತ್ವದ ಸನ್ಯಾಲರಿಗೆ ಆರೋಗ್ಯ ಸಂಪೂರ್ಣವಾಗಿ ಕೈಕೊಟ್ಟು ಸೆರೆಮನೆಯಲ್ಲೇ ಅಮರರಾದರು.
ಕವಿಗೆ ಬೇಕಿರುವುದು ಭಗವತ್ಸಾಕ್ಷಾತ್ಕಾರವೇ ಹೊರತು ಹಾರತುರಾಯಿಗಳಲ್ಲ’ ಎಂಬ ನೇರ, ವಿನೀತ ನಡೆಯಿಂದ ಸಾಹಿತಿಯ ಬದುಕಿನ ಮೂಲ ಉದ್ದೇಶವನ್ನರುಹಿದ ರಾಷ್ಟ್ರಕವಿ ರಾಮಚಂದ್ರ ನಾರಾಯಣ ದ್ವಿವೇದಿ, ಸ್ವತಂತ್ರ ಭಾರತದ ಮಹಾಕವಿ. ಬಾಲ್ಯದಿಂದಲೇ ಹಿಂದಿ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿ ಕಾಲೇಜು ದಿನಗಳಲ್ಲಿ ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿ, ವಿದ್ವನ್ಮಣಿಗಳ ಪ್ರಶಂಸೆಗೆ ಪಾತ್ರರಾದ ದ್ವಿವೇದಿ, ‘ಪ್ರದೀಪ’ ಕಾವ್ಯನಾಮದಿಂದ ಸಾಹಿತ್ಯಜಗತ್ತನ್ನು ಪ್ರವೇಶಿಸಿದರು. ಪದವಿಯ ಬಳಿಕ ಅಧ್ಯಾಪನ ವೃತ್ತಿಯ ಕನಸು ಕಂಡ ಪ್ರದೀಪರಿಗೆ ಚಲನಚಿತ್ರಲೋಕ ಕೈಬೀಸಿ ಕರೆಯಿತು. ಬಂಧನ್, ಕಿಸ್ಮತ್ ಚಿತ್ರಗಳಿಗೆ ಬರೆದ ಚಲ್ ಚಲ್ ನೌಜವಾನ್',ದೂರ್ ಹಟೋ ಏ ದುನಿಯಾವಾಲೆ ಹಿಂದುಸ್ಥಾನ್ ಹಮಾರಾ ಹೈ’ ಗೀತೆಗಳು ಮನೆಮನೆಗಳಲ್ಲಿ ಅನುರಣನಗೊಂಡವು. ಹಾಡು ಮುಗಿಯುತ್ತಿದ್ದಂತೆ ಇನ್ನೊಮ್ಮೆ' ಎಂಬ ಕೂಗು ಸಾಮಾನ್ಯವಾಯಿತು. ಕ್ವಿಟ್ ಇಂಡಿಯಾ ಆಂದೋಲನದ ಬೆಂಕಿಗೆ ತುಪ್ಪ ಸುರಿದಂತಿದ್ದ ಪದ್ಯಗಳಿಂದ ಭೀತರಾದ ಬ್ರಿಟಿಷ್ ಅಧಿಕಾರಿಗಳು ಪ್ರದೀಪರ ಬಂಧನಕ್ಕೆ ಬಲೆ ಬೀಸಿದರು. ಅನೇಕ ತಿಂಗಳುಗಳ ಕಾಲ ಭೂಗತರಾಗಿಯೇ ಉಳಿದು ತಮ್ಮ ದೇಶಪ್ರೇಮದ ಕವನಗಳಿಂದ ಆಬಾಲವೃದ್ಧರನ್ನು ಸ್ವಾತಂತ್ರ‍್ಯ ಚಳವಳಿಯಲ್ಲಿ ತೊಡಗಿಸುವಂತೆ ಮಾಡಿದ ಕವಿ ಪ್ರದೀಪರ ಲೇಖನಿಯ ಮೊನಚಿಗೆ ಸರಕಾರ ತತ್ತರಿಸಿತು. ದೇಶಭಕ್ತಿಯ ಭಾವವನ್ನು ಸದಾ ಸ್ಫುರಿಸುವ ಅವರ ಸಾಲುಗಳು ಸ್ವಾತಂತ್ರ‍್ಯ ಹೋರಾಟಗಾರರಿಗೆ ಸ್ಫೂರ್ತಿ ಕೇಂದ್ರ. ಅವರ ರಚನೆಯ ಹಾಡುಗಳನ್ನು ಕೇಳಲೆಂದೇ ಸಿನೆಮಾವನ್ನು ಮತ್ತೆ ಮತ್ತೆ ನೋಡುವ ದೊಡ್ಡ ಅಭಿಮಾನಿವರ್ಗ ಸಂಪಾದಿಸಿದ್ದ ಪ್ರದೀಪರು, ಜೈ ಸಂತೋಷಿ ಮಾ ಚಿತ್ರಕ್ಕೆ ಬರೆದ ಹಾಡು ಪ್ರಸಾರವಾಗುತ್ತಿದ್ದಂತೆ ಮುತ್ತೆöÊದೆಯರು ಆರತಿ ಬೆಳಗುತ್ತಿದ್ದರಂತೆ. ೧೯೬೨ರ ಚೀನಾ ವಿರುದ್ಧದ ಯುದ್ಧದಲ್ಲಿ ಪರಮವೀರ ಮೇಜರ್ ಶೈತಾನ್ ಸಿಂಗ್ ಸಾಹಸದಿಂದ ಸ್ಫೂರ್ತಿಪಡೆದ ಪ್ರದೀಪರು, ನೂರಾರು ಸೈನಿಕರ ಬಲಿದಾನದಿಂದ ನೋವುಂಡು ಬರೆದಏ ಮೇರೆ ವತನ್ ಕೆ ಲೋಗೊ’ ವಂದೇ ಮಾತರಂ ಹಾಡಿನ ಬಳಿಕ ದೇಶವನ್ನು ಒಗ್ಗೂಡಿಸಿದ ಮಂತ್ರವಾಯಿತು. ಸೈನಿಕರೇ ನಮ್ಮ ನಿಜವಾದ ನಾಯಕರೆಂಬ ಭಾವನೆ ಜಾಗೃತಗೊಳಿಸಿ, ಆಳುವ ಸರಕಾರದ ಅಸಡ್ಡೆಯ ನಡುವೆಯೂ ಚೀನಾವನ್ನು ಬಗ್ಗುಬಡಿದ ಯೋಧರ ಧೈರ್ಯ, ಬಲಿದಾನವನ್ನು ಕೊಂಡಾಡಿದ ಅವಿನಾಶಿ ಹಾಡು, ಲತಾ ಮಂಗೇಶ್ಕರ್ ಧ್ವನಿಯಲ್ಲಿ ೧೯೬೩ರ ಗಣತಂತ್ರ ದಿನದಂದು ಮೊಳಗಿತು. ಹಾಡಿನ ಪ್ರಸಿದ್ಧಿಯಿಂದ ಬಂದ ಪೈಸೆ ಪೈಸೆಯನ್ನೂ ಯುದ್ಧ ವಿಧವಾ ಫಂಡ್'ಗೆ ಸಮರ್ಪಿಸಿದ ಪ್ರದೀಪರು ಉಲ್ಲೇಖಿಸಿದ, ಯಾರೂ ನಿನ್ನನ್ನು ದೇಶಭಕ್ತನನ್ನಾಗಿ ಮಾಡಲಾರರು. ಅದು ರಕ್ತದಲ್ಲೇ ಇರಬೇಕು. ದೇಶಸೇವೆಯೇ ವ್ಯಕ್ತಿತ್ವ ವಿಕಸನದ ಹೆದ್ದಾರಿ’ ಮಾತು ಸಾರ್ವಕಾಲಿಕ ಸತ್ಯ. ಕವಿ, ಗೀತರಚನೆಕಾರರಾಗಿ ಐದು ದಶಕಗಳ ಕಾಲ ಕಲಾತಪಸ್ವಿಯಂತೆ ಬದುಕಿ ಸಾವಿರದ ಐನೂರಕ್ಕೂ ಹೆಚ್ಚು ಪ್ರೇರಣಾದಾಯಿ ಗೀತೆ ಬರೆದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಪ್ರದೀಪರ ಬದುಕು ಯುವ ಸಮುದಾಯಕ್ಕೆ ಪ್ರೇರಣೆ. ಹಾಡಿನಿಂದಲೇ ದೇಶವಾಸಿಗಳನ್ನು ಬೆಸೆದು ಏಕಾತ್ಮ ಭಾರತದ ಸಸಿಗೆ ನೀರೆರೆದ ರಾಷ್ಟ್ರಕವಿಯ ಸಾಹಿತ್ಯಾಶಯ ಸಾಕಾರಗೊಳ್ಳುವ ಕಾಲ ಪಕ್ವವಾಗುತ್ತಿರುವುದು ಸಂತಸದ ಸಂಗತಿ.