ನಾಗೇಂದ್ರ ಹಾರ ಸರ್ಕಾರದ ಪ್ರಹಾರ

Advertisement

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಶಾಮೀಲಾದ ಗಂಭೀರ ಆರೋಪ ಎದುರಿಸುತ್ತಿರುವ ಪರಿಶಿಷ್ಟ ಪಂಗಡ ಕಲ್ಯಾಣ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವರ್ಷದ ಹಿಂದೆ ರಚನೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೊದಲ ಮಂತ್ರಿ ಭ್ರಷ್ಟಾಚಾರದ ಆರೋಪದಿಂದ ಮಂತ್ರಿಗಿರಿ ಕಳೆದುಕೊಂಡಂತಾಗಿದೆ.
ಗುರುವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕುರಿತಂತೆ ಅನಿಶ್ಚಿತತೆ ಉಂಟಾಗಿತ್ತಾದರೂ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ಪತ್ರ ಪಡೆದು ಅಂಗೀಕರಿಸಿ, ರಾಜ್ಯಪಾಲರಿಗೆ ರವಾನಿಸಿದರು. ಸಂಯುಕ್ತ ಕರ್ನಾಟಕ ಕಳೆದ ೧೦ ದಿನಗಳಿಂದ ವಾಲ್ಮೀಕಿ ನಿಗಮದ ಹಗರಣದ ಮೇಲೆ ಬೆಳಕು ಚೆಲ್ಲಲು `ರತ್ನಾಕರ ರಹಸ್ಯ’ ಶೀರ್ಷಿಕೆಯಲ್ಲಿ ನಿರಂತರ ತನಿಖಾ ವರದಿ ಮತ್ತು ಹಗರಣದ ಬೆಳವಣಿಗೆಗಳ ಕುರಿತು ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಪ್ರತಿಪಕ್ಷಗಳು ಹಾಗೂ ರಾಜ್ಯದ ಜನರು ಸಚಿವರ ತಲೆದಂಡಕ್ಕೆ ಆಗ್ರಹಿಸಿದ್ದರು. ಕೊನೆಗೂ ಜನಾಭಿಪ್ರಾಯಕ್ಕೆ ಮಣಿದ ಸರಕಾರ ಸಚಿವರ ತಲೆದಂಡ ಮಾಡಿದೆ.
ವಾಲ್ಮೀಕಿ ನಿಗಮದ ಲೆಕ್ಕ ಅಧೀಕ್ಷಕ ಪಿ.ಚಂದ್ರಶೇಖರನ್ ಮೇ ೨೫ರಂದು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶದ ಮೇರೆಗೆ ನಿಗಮದ ಹಣವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೇ ನಿಗಮದ ಎಂಡಿ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ ಹೆಸರನ್ನೂ ಬರೆದಿದ್ದರು. ಇದರ ಬೆನ್ನಲ್ಲೇ ಸರಕಾರದ ಹಣವು ಹೈದರಾಬಾದ್ ಮೂಲಕ ರತ್ನಾಕರ ಬ್ಯಾಂಕ್‌ಗೆ ವರ್ಗಾವಣೆಗೊಂಡಿದೆ ಎಂದು ಸಂಯುಕ್ತ ಕರ್ನಾಟಕ ಮೊಟ್ಟಮೊದಲ ಬಾರಿಗೆ ಸ್ಫೋಟಕ ಮಾಹಿತಿ ಹೊರಹಾಕಿತ್ತು.
ಅದಾದ ಬಳಿಕ ರಾಜ್ಯ ಸರಕಾರ ಸಿಐಡಿ ಘಟಕದ ಅಡಿಯಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿತ್ತು. ಸಚಿವ ನಾಗೇಂದ್ರ ಆಪ್ತ ಎನ್ನಲಾದ ನೆಕ್ಕಂಟಿ ನಾಗರಾಜ, ಹೈದರಾಬಾದ್‌ನ ಸಹಕಾರ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ, ನಿಗಮದ ಅಧಿಕಾರಿಗಳಾದ ಪದ್ಮನಾಭ ಮತ್ತು ಪರಶುರಾಮ ಅವರನ್ನು ಬಂಧಿಸಿತ್ತು.
ಸಾರ್ವಜನಿಕ ವಲಯದಲ್ಲೂ ಹಗರಣದ ಬಗ್ಗೆ ಭಾರಿ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬುಧವಾರ ತಡರಾತ್ರಿಯೇ ಸಚಿವ ನಾಗೇಂದ್ರ ಅವರನ್ನು ಕರೆಸಿಕೊಂಡು ರಾಜಿನಾಮೆ ಕೊಡುವಂತೆ ಹೇಳಿದ್ದರು. ಆದರೆ ಇಷ್ಟೆಲ್ಲ ಬೆಳವಣಿಗೆ ನಡೆದರೂ ಸರಕಾರ ವಾಲ್ಮೀಕಿ ನಿಗಮದ ಮಾತೃಸಂಸ್ಥೆಯಾದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಸಚಿವರ ರಾಜಿನಾಮೆ ಪಡೆಯುತ್ತಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಗುರುವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಟಿ.ಸಿ.ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸಚಿವ ನಾಗೇಂದ್ರ ತಮ್ಮ ಮಂತ್ರಿಗಿರಿಗೆ ರಾಜಿನಾಮೆ ನೀಡಿದರು.

ಯಾವಾಗ? ಏನು?
ಮೇ ೨೬: ವಾಲ್ಮೀಕಿ ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ
ಮೇ ೨೮: ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ
ಮೇ ೩೧: ನಿಗಮದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ
ಜೂನ್ ೧: ನಿಗಮದ ಎಂ.ಡಿ. ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ ದುರಗಣ್ಣವರ್ ಬಂಧನ
ಜೂನ್ ೩: ಬ್ಯಾಂಕಿನ ಮೂವರು ಅಧಿಕಾರಿಗಳ ಮೇಲೆ ಸಿಬಿಐ ಎಫ್‌ಐಆರ್ ದಾಖಲು
ಜೂನ್ ೪: ಹೈದರಾಬಾದ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಸೆರೆ
ಜೂನ್ ೬: ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆ