ಶಾಸ್ತ್ರದಲ್ಲಿ ನವವಿಧ ಭಕ್ತಿಗಳನ್ನು ಹೇಳಲಾಗಿದೆ. ಅವು ಶ್ರವಣ, ಕೀರ್ತನ, ಶಿವಸ್ಮರಣೆ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ ಎಂಬುದಾಗಿ ಇವೆ.
ಈ ಒಂಭತ್ತು ಭಕ್ತಿಗಳಲ್ಲಿ ವಂದನೆಯೂ ಒಂದು ಭಕ್ತಿಯಾಗಿದೆ. “ಭಕ್ತಿಯೇ ಮುಕ್ತಿಗೆ ಮೂಲ” ಎಂಬ ಉಕ್ತಿಯಂತೆ ಭಕ್ತಿಯ ಒಂದು ಬಗೆಯಾದ ಈ ವಂದನೆಯು ಮುಕ್ತಿಗೆ ಸಹಜವಾಗಿ ಸಾಧನವಾಗುತ್ತದೆ. ಅಹಂಕಾರವೆ ಮನುಷ್ಯನು ಬಂಧನದಿಂದ ಮುಕ್ತಿ ಹೊಂದಲು ಪ್ರಮುಖ ಪ್ರತಿಬಂಧಕ. “ಅಹಂ ಅಳಿಯೆ ಮುಕ್ತಿ” ಎಂಬ ಉಕ್ತಿಯಂತೆ ಅಹಂಕಾರ ಅಳಿಯುವವರೆಗೆ ಜೀವಾತ್ಮನಿಗೆ ಮುಕ್ತಿ ಸಮನಿಸಲಾರದು. ಈ ಅಹಂಕಾರವನ್ನು ಕಳೆದುಕೊಳ್ಳಲು ನಮಸ್ಕಾರವು ಒಂದು ಉತ್ಕೃಷ್ಟ ಮಾದ್ಯಮ. ತನ್ಮೂಲಕ ಮುಕ್ತಿಗೂ ಇದುವೆ ಸೋಪಾವಾಗಬಲ್ಲುದಾಗಿದೆ. ಅಂತೆಯೇ ಸಂಸ್ಕೃತ ಕವಿಯೋರ್ವ ದೇವರಲ್ಲಿ ಈ ಕೆಳಗಿನಂತೆ ಪ್ರಾರ್ಥಿಸಿಕೊಂಡಿದ್ದಾನೆ.
ವಪುಃ ಪ್ರಾದುರ್ಭಾವಾದನುಮಿತಮಿದಂ
ಪುರಾರೇ ನ ಕ್ವಾಪಿ ಕ್ವಚಿದಪಿ ಪ್ರಣತವಾನ್ |
ನಮನ್ಮುಕ್ತ್ವಾಹಮತನ್ವಗ್ರೇನಮಾಮೀತಿ
ಸಂಕ್ಷಂತವ್ಯಂ ತದಿದಮಪರಾಧದ್ವಯಮಪಿ ||
ಹೇ ಪರಮಾತ್ಮನೆ! ಒಂದು ವೇಳೆ ಹಿಂದಿನ ಜನ್ಮದಲ್ಲಿ ನಿನಗೆ ನಮಸ್ಕರಿಸಿದ್ದರೆ ಹಿಂದಿನ ಜನ್ಮದಲ್ಲೇ ಮುಕ್ತಿ ಪಡೆಯುತ್ತಿದ್ದೆ ಆದ್ದರಿಂದ ಈ ಜನ್ಮದಲ್ಲಿ ಹುಟ್ಟಿ ಬರುತ್ತಿರಲಿಲ್ಲ. ಈಗ ಹುಟ್ಟಿ ಬಂದಿರುವುದೇ ಹಿಂದಿನ ಜನ್ಮದಲ್ಲಿ ನಿನಗೆ ನಮಸ್ಕರಿಸಿಲ್ಲ ಎನ್ನುವುದಕ್ಕೆ ಪ್ರಮಾಣ. ಇನ್ನು ಈ ಜನ್ಮದಲ್ಲಿ ನಮಸ್ಕರಿಸುತ್ತಿರುವುದರಿಂದ ಇದೇ ಜನ್ಮದಲ್ಲಿ ನಾನು ಮುಕ್ತನಾಗುತ್ತೇನೆ. ಅದ್ದರಿಂದ ನನಗೆ ಮುಂದಿನ ಜನ್ಮ ಬರುವುದಿಲ್ಲ. ಮುಂದಿನ ಜನ್ಮವೇ ಇಲ್ಲವೆಂದು ಮೇಲೆ ಮುಂದಿನ ಜನ್ಮದಲ್ಲೂ ನಿನಗೆ ನಮಸ್ಕರಿಸುವುದಿಲ್ಲ. ಹೀಗೆ ನಾನು ಹಿಂದಿನ ಜನ್ಮದಲ್ಲಿಯೂ ನಿನಗೆ ನಮಸ್ಕಿರಿಸಿಲ್ಲ ಮತ್ತು ಮುಂದಿನ ಜನ್ಮದಲ್ಲಿಯೂ ನಮಸ್ಕರಿಸುವುದಿಲ್ಲ. ಈ ಜನ್ಮದಲ್ಲಿ ಮಾತ್ರ ನಮಸ್ಕರಿಸುತ್ತಿದ್ದೇನೆ. ಆದ್ದರಿಂದ ಈ ಹಿಂದೆ ಮತ್ತು ಮುಂದೆ ಎರಡೂ ಜನ್ಮದಲ್ಲಿ ನಮಸ್ಕರಿಸದಿರುವ ಎರಡೂ ಅಪರಾಧಗಳನ್ನು ಕ್ಷಮಿಸು. ಎಂದು ವಿನಂತಿಸಿದ್ದಾನೆ. ಒಟ್ಟಿನಲ್ಲಿ ಶಿವನಿಗೆ ನಮಸ್ಕರಿಸುವವರಿಗೆ ಭವ ಬಂಧನದಿಂದ ಬಿಡುಗಡೆಯಾಗಿ ನಿಶ್ಚಿತವಾಗಿ ಮುಕ್ತಿ ದೊರೆಯುತ್ತದೆ ಎಂಬುದು ಈ ಕವಿಯ ಆಶಯ. ಅದು ನಿಜವೂ ಕೂಡ. ಆದ್ದರಿಂದ ನವ ವಿಧವಾದ ಭಕ್ತಿಗಳಲ್ಲಿ ವಂದನೆಗೆ ವಿಶೇಷ ಮಹತ್ತ ನೀಡಲಾಗಿದೆ. ಅಂತೆಯೇ ಪೂಜೆಯಲ್ಲಿ ಈ ನಮಸ್ಕಾರವು ನವ ವಿಧ ಭಕ್ತಿಗಳಲ್ಲಿ ಒಂದಾಗಿರುವಂತೆ ದೇವರ ಪೂಜೆಯ ಸಾಮಗ್ರಿಗಳಲ್ಲೂ ಒಂದಾಗಿದೆ. ಪೂಜೆಯಲ್ಲಿ ಅಂತಿಮ ಸಾಮಗ್ರಿಯಾದ ಇದಕ್ಕೆ ಸಮರ್ಪಣ ಮನೋಭಾವ ಒಂದಿದ್ದರೆ, ಸಾಕು ಇನ್ನುಳಿದ ಯಾವ ಪದಾರ್ಥಗಳ ಅವಶ್ಯಕತೆಯೂ ಇರುವುದಿಲ್ಲ.