ಬೆಂಗಳೂರು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ವಿಧಾನಸೌಧದ ಮುಂಭಾಗ ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ. ಜಾಗತಿಕವಾಗಿ 1.5 ಕೋಟಿ ಜನರು ಇಂದು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದಾರೆ. ಈ ಬಾರಿಯ ಅಂತರಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಮ್ಮ ಗುರಿ ಯುವ ಜನತೆಯ ಸಬಲೀಕರಣ ಆಗಬೇಕು ಎಂಬ ಉದ್ದೇಶದೊಂದಿಗೆ ನಮ್ಮ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷನ್ನಾಗಿ ನಾನು ಜವಾಬ್ದಾರಿ ತೆಗೆದುಕೊಂಡ ದಿನದಂದು ಕಾಂಗ್ರೆಸ್ ಕಾರ್ಯಕರ್ತರು ಭಾರತ ಸಂವಿಧಾನ ಪೀಠಿಕೆಯನ್ನು ಓದುವ ಮೊದಲ ಕಾರ್ಯಕ್ರಮವನ್ನು ಮಾಡಲಾಗಿತ್ತು. ಇಂದು ಸಂವಿಧಾನ ಪೀಠಿಕೆ ಓದುವ ಎರಡನೇ ಹೆಜ್ಜೆ ಮತ್ತು ಯಶಸ್ಸಿನಲ್ಲಿ ನಾವಿದ್ದೇವೆ. ನಮ್ಮ ಭವಿಷ್ಯದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯುವ ಸಮುದಾಯ ಮತ್ತು ಮಕ್ಕಳ ಪಾತ್ರದ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ. ಸುರಕ್ಷಿತ ಯುವ ಸಮುದಾಯ ಪ್ರಜಾಪ್ರಭುತ್ವ ದೇಶದ ಒಂದು ದೊಡ್ಡ ಆಸ್ತಿ ಇದ್ದಂತೆ. ಉತ್ತಮ ಶಿಕ್ಷಣದ ಮೂಲಕ ಯುವಪೀಳಿಗೆಗೆ ಶಕ್ತಿ ತುಂಬಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಮೂಲಕ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸೋಣ. ಇಡೀ ವಿಶ್ವದಲ್ಲೇ ಭಾರತದ ಪ್ರಜಾಪ್ರಭುತ್ವಕ್ಕೆ ವಿಶಿಷ್ಟ ಸ್ಥಾನವಿದೆ. ನಮ್ಮ ಸಂವಿಧಾನದ ಆಶಯಗಳೂ ವಿಶಿಷ್ಟವಾಗಿವೆ. ನೀವೂ ನಾವೆಲ್ಲರೂ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡೋಣ ಎಂದು ತಿಳಿಸಿದ್ದಾರೆ.