ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದಲ್ಲಿರುವ ಇತರ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು ಎನ್ನುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ಗಳು ಕಾರ್ಯಾರಂಭ ಮಾಡುತ್ತಿವೆ. ಪ್ರತಿ ನಮ್ಮ ಕ್ಲಿನಿಕ್ 10 ರಿಂದ 20 ಸಾವಿರ ಜನರಿಗೆ ಸೇವೆ ಒದಗಿಸಲಿದೆ.
ನಮ್ಮ ಕ್ಲಿನಿಕ್ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದೆ. ಪ್ರತಿ ನಮ್ಮ ಕ್ಲಿನಿಕ್ನಲ್ಲಿಯೂ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರ ಇರುತ್ತಾರೆ. ಇಲ್ಲಿ ಲಭ್ಯವಿರುವ 12 ಸೇವೆಗಳಲ್ಲಿ ಗರ್ಭಿಣಿಯರ ತಪಾಸಣೆ ಮತ್ತು ಆರೈಕೆ, ನವಜಾತ ಶಿಶುಗಳ ಆರೈಕೆ, ಶಿಶುಗಳಿಗೆ ಚಿಕಿತ್ಸೆ, ಮಕ್ಕಳು ಮತ್ತು ಹದಿಹರೆಯದವರ ಆರೋಗ್ಯ ಕಾಳಜಿ, ಲಸಿಕೆ ಸೇವೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿರ್ವಹಣೆ, ಸಣ್ಣಪುಟ್ಟ ಗಾಯಗಳಿಗೆ ಆರೈಕೆ, ಮರುಕಳಿಸುವ ಕಾಯಿಲೆಗಳು ಸೇರಿವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಗುವುದು.
ವಯೋವೃದ್ಧರ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಆರೋಗ್ಯ ತಪಾಸಣೆ ಮತ್ತು ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು. 14 ಬಗೆಯ ಲ್ಯಾಬ್ ಟೆಸ್ಟ್ಗಳು, ಟೆಲಿ ಕನ್ಸಲ್ಟೇಶನ್ ಸೌಲಭ್ಯ, ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆಗಳು ಉಚಿತವಾಗಿ ದೊರೆಯುತ್ತವೆ. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 4.30ರವರೆಗೆ ನಮ್ಮ ಕ್ಲಿನಿಕ್ಗಳು ಕಾರ್ಯ ನಿರ್ವಹಿಸುತ್ತವೆ. ಜನವಸತಿಗಳಿಗೆ ಹತ್ತಿರದಲ್ಲಿ ಕ್ಲಿನಿಕ್ಗಳನ್ನು ಆರಂಭಿಸುವುದರಿಂದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರಿ ಆಸ್ಪತ್ರೆಗಳ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ.