ನಮ್ಮೂರ ಮಹಾತ್ಮೆ: ತೆಂಗಿಗೆ ಹೆಸರಾದ ಕಲ್ಪತರು ನಾಡು

Advertisement

ತ್ರಿವಿಧ ದಾಸೋಹಿ, ಅಕ್ಷರ ಸಂತ ಶ್ರೀ ಶಿವಕುಮಾರ ಸ್ವಾಮೀಜಿಯವರು ಸೇವೆಗೈದ ಕರ್ಮಭೂಮಿಯಾಗಿರುವ ತುಮಕೂರು ಇಂದು ಶೈಕ್ಷಣಿಕ ನಗರವಾಗಿ ಬೆಳೆದಿದ್ದು ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ, ಸಿದ್ದಾರ್ಥ ಎಂಜಿನಿಯರಿAಗ್ ಕಾಲೇಜು, ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಶ್ರೀದೇವಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆ ಹೀಗೆ ಅಧಿಕ ಶಿಕ್ಷಣ ಸಂಸ್ಥೆಗಳಿವೆ.

ಸತೀಶ್ ಟಿ.ಎನ್.

ತುಮಕೂರು ಜಿಲ್ಲೆ ರಾಜ್ಯದ ಎರಡನೆಯ ಅತಿ ದೊಡ್ಡ ಜಿಲ್ಲೆಯಾಗಿದ್ದು ತೆಂಗಿಗೆ ಹೆಸರಾಗಿ ಕಲ್ಪತರು ನಾಡೆಂದು ಪ್ರಸಿದ್ಧವಾಗಿದೆ. ತುಮಕೂರು ಎಂದು ಹೆಸರು ಬರುವುದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ.
ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಈಗಿನ ಕರ್ನಾಟಕದ ಬಹುಪಾಲು ಭಾಗವನ್ನು ತಲಕಾಡಿನ ಗಂಗರು ಆಳುತ್ತಿದ್ದರು. ಈ ಸಮಯದಲ್ಲಿ ತುಮಕೂರಿನ ಉತ್ತರ ಭಾಗವು ನೊಳಂಬವಾಡಿ ಪ್ರಾಂತ್ಯಕ್ಕೆ ಸೇರಿತ್ತು. ಪ್ರಸ್ತುತವಾಗಿ ಆಂಧ್ರಕ್ಕೆ ಸೇರಿರುವ ಹೇಮಾವತಿಯು ನೊಳಂಬವಾಡಿಯ ರಾಜಧಾನಿಯಾಗಿತ್ತು. ಇಂದಿನ ತುಮಕೂರಿನ ದಕ್ಷಿಣ ಭಾಗವು ಗಂಗವಾಡಿ ಪ್ರಾಂತ್ಯಕ್ಕೆ ಸೇರಿದ್ದು ನೊಳಂಬವಾಡಿ ಹಾಗೂ ಗಂಗವಾಡಿ ಪ್ರಾಂತ್ಯದ ನಡುವೆ ಒಂದು ಸಣ್ಣ ಸಂಸ್ಥಾನವಿತ್ತು. ಅದುವೇ ಕ್ರೀಡಾಪುರ. (ಇಂದಿನ ಕೈದಾಳ) ಈ ಕ್ರೀಡಾಪುರದ ಅರಸರು ಗಂಗವಾಡಿ ಪ್ರಾಂತ್ಯದ ಅರಸರಿಗೆ ಸಾಮಂತರಾಗಿದ್ದ ಕಾರಣ ನೊಳಂಬವಾಡಿಯ ಅರಸರಿಗೆ ಇದನ್ನು ಸಹಿಸಲಾಗದೆ ಗಂಗವಾಡಿಯ ಅರಸರ ಮೇಲೆ ಯುದ್ಧ ಸಾರುತ್ತಿದ್ದರು.
ನೊಳಂಬವಾಡಿಯ ರಾಜರುಗಳು ಗಂಗವಾಡಿಯ ಸೈನ್ಯಕ್ಕೆ ಯಾವುದೇ ಮುನ್ಸೂಚನೆ ನೀಡದೆ ಯುದ್ಧ ನೀತಿಗಳನ್ನು ಕೈಬಿಟ್ಟು ಯಾವಾಗ ಅಂದರೆ ಆವಾಗ ಯುದ್ಧಕ್ಕೆ ಬರುತ್ತಿದ್ದರು. ನೊಳಂಬವಾಡಿಯ ಅರಸರ ಈ ಅಧರ್ಮ ಯುದ್ಧ ನೀತಿಯಿಂದ ಬೇಸತ್ತ ಗಂಗವಾಡಿಯ ಅರಸರು ಮತ್ತು ಸೈನ್ಯ ಸದಾ ಯುದ್ಧಕ್ಕೆ ಸನ್ನದ್ಧರಾಗಬೇಕಿತ್ತು. ಯುದ್ಧಕ್ಕೆ ಬರುತ್ತಿದ್ದ ನೊಳಂಬವಾಡಿ ಸೈನ್ಯ ಗುರುತಿಸಿ ಗಂಗವಾಡಿ ಸೈನ್ಯಕ್ಕೆ ತಿಳಿಸಲು ಒಂದು ಎತ್ತರದ ಪ್ರದೇಶದಲ್ಲಿ ಕಾವಲುಗಾರನನ್ನು ನೇಮಿಸಿ ಸೈನ್ಯ ಕಂಡೊಡನೆ ಕಾವಲುಗಾರ ಟುಮಕಿ ಬಾರಿಸುತ್ತಿದ್ದ. ಈ ಟುಮಕಿ ಬಾರಿಸಿದನೆಂದರೆ ಗಂಗವಾಡಿಯ ಸೈನ್ಯ ಯುದ್ಧಕ್ಕೆ ಸನ್ನದ್ಧವಾಗುತ್ತಿತ್ತು.
ಟುಮಕಿ ಅಂದರೆ ಒಂದು ರೀತಿಯ ವಾದ್ಯ ಸಾಧನ. ಇದನ್ನು ಬಾರಿಸುತ್ತಿದ್ದ ಸ್ಥಳ ಟುಂಕನಹಳ್ಳಿ ಎಂದಾಯಿತು. ನಂತರ ಬೆಳೆಯುತ್ತಾ ಟುಂಕೂರು, ತುಮಕೂರು ಆಗಿ ಇಂದು ಬೃಹತ್ ನಗರವಾಗಿ ಬೆಳೆದು ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಬೆಳೆದು ನಿಂತಿದೆ. ಇನ್ನೊಂದು ರೂಪದಲ್ಲಿ ತುಮಕೂರನ್ನು ತುಂಬೆ ಊರು ಎಂದು ಕರೆಯಲಾಗುತ್ತಿತ್ತು. ಊರಿನ ತುಂಬೆಲ್ಲ ಹೆಚ್ಚಾಗಿ ತುಂಬೆ ಹೂಗಳಿದ್ದವು. ಆದ್ದರಿಂದ ತುಂಬೆ ಊರು ತುಮಕೂರು ಆಯಿತು.

ನಾಳೆ: ಯಕ್ಸಂಬಾ
ನೀವೂ ಬರೆಯಬಹುದು. ಲೇಖನಗಳನ್ನು email id: sknammuru@gmail.com ಗೆ ಕಳಿಸಿ.