ಹಾವೇರಿ: ನಾನು ಮಾಡುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ʻಹೋದ ಸಿದ್ದ ಬಂದ ಸಿದ್ದ ಅಂತ ಅಲ್ಲ’ ಸ್ಥಳದಲ್ಲಿಯೇ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲಾಗುತ್ತಿದೆ. ಈವರೆಗೆ 3,38,876 ಅರ್ಜಿಗಳಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಸಭೆ ಮಾಡಿ ಓಡಿ ಹೋಗೋಕೆ ಬಂದಿಲ್ಲ, ಇಲ್ಲೇ ಇದ್ದು ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕೊಡುವುದು ನಮ್ಮ ಉದ್ದೇಶ. ಎಸಿ, ತಹಶೀಲ್ದಾರ್, ಮಂತ್ರಿಗಳು ದೇವತೆಗಳಿದ್ದಂತೆ. ಅವರನ್ನು ಈ ಹಿಂದೆ ಯಾರೂ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಜನರು ಹತ್ತಾರು ಸಲ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪರಿಹಾರ ಸಿಗುತ್ತಿರಲಿಲ್ಲ. ಅದರ ಬದಲು ಡಿಸಿ, ಎಸಿಗಳು ಹಳ್ಳಿಗೆ ಬಂದ್ರೆ ಒಳ್ಳೆದಾಗುತ್ತದೆ. ಈ ನಿಟ್ಟಿನಲ್ಲಿ ಜನರ ಕಷ್ಟ ಏನು ಎಂಬುದನ್ನು ಅರಿತು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.
ಜನರು ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಅಲೆದು ಅಲೆದು ಚಪ್ಪಲಿ ಸವೆದು ಹೋಗುತ್ತಿತ್ತು. ಆದರೆ ಈಗ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಜನರ ಮನೆ ಬಾಗಿಲಿಗೆ ಸರ್ಕಾರಿ ಕಚೇರಿಗಳು ಬರುವಂತಾಗಿದೆ. ಇದು ನನ್ನ 13ನೇ ಗ್ರಾಮ ವಾಸ್ತವ್ಯ ಎಂದರು.
ಏನು ಸಾಧನೆ ಮಾಡಿದ್ದೀರಿ, ನೀವು ಏನು ಮಾಡಿಲ್ಲ ಅಂತಾ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಯಥೇಚ್ಛವಾಗಿ ರಾಜ್ಯದಲ್ಲಿ ಮಳೆ ಸುರಿದು ನದಿಗಳು, ಡ್ಯಾಂಗಳು ತುಂಬಿ ತುಳುಕುತ್ತಿವೆ. ನಮ್ಮ ಸರ್ಕಾರ ಮನೆ ಕಳೆದುಕೊಂಡವರಿಗೆ, ಬೆಳೆಹಾನಿಯಾದ ರೈತರಿಗೆ ಒಂದೇ ತಿಂಗಳಲ್ಲಿ 6590 ಕೊಟಿ ರೂ, ಪರಿಹಾರ ಕೊಟ್ಟಿದ್ದೇವೆರ. ಈ ಹಿಂದಿನ ಸರ್ಕಾರ ಪರಿಹಾರ ನೀಡಲು 8 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಹಿಂದೆ ಮನೆ ಬಿದ್ದರೆ 95 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಈಗ 5 ಲಕ್ಷ ರೂ. ನೀಡುತಿದ್ದು, 3,3648 ಜನರಿಗೆ 3594 ಕೋಟಿ ಹಣ ನೀಡಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ನಾಲ್ಕು ಸಾವಿರ ಕೋಟಿ ಕೊಟ್ಟಿದ್ದರೆ, ನಮ್ಮ ಪ್ರಧಾನಿ ಮೋದಿ ಅವರು 14840 ಕೋಟಿ ಹಣವನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ ಎಂದು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ನಮಗೆ ಭೋಗಸ್ ಭಾಗ್ಯ ಬೇಡ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.