ಹುಬ್ಬಳ್ಳಿ : ನನಗೆ ಟಿಕೆಟ್ ಕೊಡಿಸಲು ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ಕೈಗೂಡಲಿಲ್ಲ. ಹೀಗಾಗಿ ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅವರಿಗೆ ಈ ರೀತಿ ಹೇಳಲು ಪಕ್ಷದ ಮೇಲಿನವರಿಂದ ಒತ್ತಡವಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪಿಸಿದರು. ಬೆಂಗಳೂರಿನಲ್ಲಿ ಯಡಿಯೂರಪ್ಪ ತುರ್ತು ಪತ್ರಿಕಾಗೋಷ್ಠಿ ನಡೆಸಿ ಶೆಟ್ಟರ ವಿರುದ್ಧ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶೆಟ್ಟರ ಅವರು ಶಿರಸಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದರು.
ಕೊನೆಯ ಹಂತದವರೆಗೂ ಇದೇ ಯಡಿಯೂರಪ್ಪನವರು ಪಕ್ಷದ ಹೈ ಕಮಾಂಡ್‌ಗೆ ಮನವರಿಕೆ ಪ್ರಯತ್ನ ಮಾಡಿದರು. ನೀವು ಹಿರಿಯರು ನಿಮಗೆ ಟಿಕೆಟ್ ಕೊಡಬೇಕು ಎಂದೇ ನಾನು ಹೇಳಿದ್ದೇನೆ ಎಂದಿದ್ದರು. ಹಾಗೆ ಹೇಳಿದವರು ಈಗ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಹೇಗೆ? ಒತ್ತಡ ಕಾರಣದಿಂದಲೇ ನೀಡಿರುವ ಹೇಳಿಕೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ ಎಂದು ಶೆಟ್ಡರ ಹೇಳಿದರು.
ನಾನು ಅಕ್ರಮ ಅಡ್ಡೆಗಳನ್ನು ನಡೆಸಿದ್ದಿಲ್ಲ, ನನ್ನ ಮೇಲೆ ಯಾವ ಕೇಸ್‌ಗಳೂ ಇಲ್ಲ. ಆದಾಗ್ಯೂ ಟಿಕೆಟ್ ನಿರಾಕರಣೆ ಮಾಡಿದರು. ನಾನು ಕೇಳಿದ್ದ ಬರೀ ಒಂದು ವಿಧಾಸಭಾ ಕ್ಷೇತ್ರಕ್ಕೆ ಟಿಕೆಟ್ ಅಷ್ಟೇ. ಮುಖ್ಯಮಂತ್ರಿ ಸ್ಥಾನ ಅಥವಾ ಇನ್ಯಾವುದೇ ದೊಡ್ಡ ಹುದ್ದೆಗಳನಲ್ಲ ಎಂದು ಹೇಳಿದರು.