ಬೆಂಗಳೂರು: ನಾನು ಚುನಾವಣೆಗೆ ನಿಲ್ಲುವುದಿಲ್ಲ. ಸ್ನೇಹ, ಸಂಬಂಧಕ್ಕೆ ಬೆಲೆ ಕೊಟ್ಟು ನಮ್ಮವರಿಗಾಗಿ ನನ್ನ ಮಾಮಾ ಬೊಮ್ಮಾಯಿಯವರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಚಿತ್ರನಟ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ನಾನು ಚಿಕ್ಕವನಿದ್ದಾಗಿಂದ ಜತೆಯಾಗಿದ್ದಾರೆ. ನನ್ನ ಕಷ್ಟದ ದಿನಗಳಲ್ಲಿ ನನ್ನ ಜತೆಯಾಗಿದ್ದವರು ಅವರಿಗಾಗಿ ನಾನು ಇಂದು ಬಂದಿದ್ದೇನೆ. ಆದರೆ, ಅವರೇ ಚುನಾವಣೆಗೆ ನಿಲ್ಲು ಎಂದು ಹೇಳಿದರೂ ನಾನು ಸ್ಪರ್ಧಿಸಲ್ಲ ಎಂದರು.
ಎಲ್ಲರ ಪರವೂ ಪ್ರಚಾರ ಮಾಡಲು ನನ್ನಿಂದ ಸಾಧ್ಯವಿಲ್ಲ. ಬೊಮ್ಮಾಯಿಯವರ ಪರ ಖಂಡಿತ ಪ್ರಚಾರ ಮಾಡುತ್ತೇನೆ. ಪ್ರಚಾರದ ಹೆಸರಲ್ಲಿ ಯಾವುದೇ ಹಣವನ್ನೂ ಪಡೆದಿಲ್ಲ. ಸಿನಿಮಾವನ್ನು ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಸುದೀಪ್ ಮತ್ತು ನನ್ನ ಸಂಬಂಧ ಉತ್ತಮ ರೀತಿಯಾಗಿದೆ. ನನಗಾಗಿ ಅವರು ಬಂದಿದ್ದಾರೆ. ನಾನು ಹೇಳಿದರೆ ಅವರು ನಮ್ಮವರ ಪರ ಪ್ರಚಾರ ಮಾಡುತ್ತಾರೆ ಎಂದರು.