ನನ್ನ ಟಾರ್ಗೆಟ್ ಏನಿದ್ದರೂ ಕಾಂಗ್ರೆಸ್, ಜೆಡಿಎಸ್: ಯತ್ನಾಳ

yatnal
Advertisement

ಇನ್ಮುಂದೆ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರ ವಿರುದ್ಧ ಮಾತನಾಡಲ್ಲ, ನನ್ನ ಟಾರ್ಗೆಟ್ ಏನಿದ್ದರೂ ಕಾಂಗ್ರೆಸ್, ಜೆಡಿಎಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಇದ್ದ ತಪ್ಪು ತಿಳುವಳಿಕೆ ಸರಿಯಾಗಿದೆ. ಕೊಳೆ ಎಲ್ಲಾ ಹೋಗಿ ಯತ್ನಾಳ್ ಒಬ್ಬ ಅಪ್ಪಟ ಚಿನ್ನ ಅನ್ನೋದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಎಲ್ಲರಿಗೂ ತಿಳಿದಿದೆ ಎಂದರು.
ರಾಜಕೀಯವಾಗಿ ತಪ್ಪು ಕಲ್ಪನೆ ಆಗಿರುತ್ತದೆ. ಯಾರೋ ಏನೋ ಹೇಳಿರುತ್ತಾರೆ. ಯತ್ನಾಳ್ ಏನು ಇಲ್ಲ, ಹಾಗೆ ಹೀಗೆ ಎಂದು ಹೇಳಿರುತ್ತಾರೆ. ಆದರೆ ಯತ್ನಾಳ್ ಏನು ಎಂದು ಈಗ ಅವರಿಗೆ ಗೊತ್ತಾಗಿದೆ ಎಂದರು. ನಾನು ಹಿಂದೆಯೂ ಕಾರ್ಯಕರ್ತ, ಈಗಲೂ ಕಾರ್ಯಕರ್ತ, ಎಂದಿಗೂ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಯತ್ನಾಳ್​ ಸ್ಪಷ್ಟಪಡಿಸಿದರು.