ನನ್ನ ಕಡೆ ಹಣವಿಲ್ಲ ನಾ ನಿಲ್ಲೋದಿಲ್ಲ

Advertisement

ಎಲೆಕ್ಷಿನ್ನಿಗೆ ಅವರು ನಿಂತುಕೊಳ್ಳುತ್ತಾರೆ… ಇವರು ಕುಳಿತುಕೊಳ್ಳುತ್ತಾರೆ… ಅವರು ಬಂಡಾಯ… ಇವರು ಡಂಬಾಯ ಎಂಬ ಇದೇ ಸುದ್ದಿ ಕಿವಿಗೆ ಬಡೆಯುತ್ತಿದ್ದ ತಿಗಡೇಸಿಗೆ ನಿಮ್ಮಕ್ಕ ಸೀತಾರಾಮಣ್ಣೋರು ಹೇಳಿದ ಮಾತು ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ನನ್ನ ಕಡೆ ರೊಕ್ಕ ಇಲ್ಲ ನಾ ನಿಲ್ಲೂದಿಲ್ಲ ಅನ್ನುವುದಕ್ಕೆ ಈ ಯಮ್ಮನಿಗೆ ಅಂಥಾದ್ದೇನು ತ್ರಾಸು ಆಗಿದೆ? ಅಲ್ಪ ಸ್ವಲ್ಪ ಬೇಕಿದ್ದರೆ ನಾನು ಕೊಡುತ್ತಿದ್ದೆ. ಅದರಲ್ಲಿ ಏನಿದೆಯೋ ಏನೋ ಕೇಳಿಯೇ ಬಿಡೋಣ ಎಂದು ಅವರ ನಂಬರನ್ನು ಹೇಗೋ ಸಂಪಾದಿಸಿ ಅವರಿಗೆ ಕಾಲ್ ಮಾಡಿಯೇ ಬಿಟ್ಟ. ಆ ಕಡೆಯಿಂದ ಹಲೋ ಹೇಳಿ ಅಂದ ಕೂಡಲೇ ಮೇಡಂ ನಾನು ಗೊತ್ತಾಗ್ಲಿಲ್ವ? ಅದೇ ತಿಗಡೇಸಿ ಅಂದ ಕೂಡಲೇ ನಿಮ್ಮಕ್ಕ… ಅಯ್ಯೋ ತಿಗಡೇಸ್ಯಾ ಹೇಗಿದ್ದಿ ಅಂದರು. ನಂದಿರಲಿ ಬಿಡಿ ಮೇಡಂ ಏನೋ ಸುದ್ದಿ ಕೇಳಿದೆ ನಿಜವೇ? ಅಂದ. ಏನದು? ಅಂತ ಕೇಳಿದಾಗ… ಮೇಡಂ ಅದೇ ನೀವು ಎಲೆಕ್ಷನ್ನಿಗೆ ನಿಲ್ಲಂಗಿಲ್ಲ ಅಂದ್ರೆಂತಲ್ಲ? ಅಂದಾಗ… ಹೌದಪ್ಪ ನಂಗೆ ನಿಲ್ಲು.. ನಿಲ್ಲು ಅಂತ ಒಂದೇ ಸಮನೆ ಸೋದಿ ಮಾಮಾರು ಗಂಟು ಬಿದ್ದರು.. ಆದರೆ ನಾ ಹೇಗೆ ನಿಲ್ಲಲಿ? ನನ್ನ ಕಡೆ ದುಡ್ಡೇ ಇಲ್ಲ. ಇಡೀ ಮನೆಯನ್ನು ಹುಡುಕಿದರೂ ಒಂದು ರೂಪಾಯಿ ಕ್ವಾಯಿನೂ ಸಿಗುವುದಿಲ್ಲ. ಹಾಗಿದ್ದ ಮೇಲೆ ನಾನು ಹೇಗೆ ನಿಲ್ಲಲಿ ನೀನೇ ಹೇಳು ಅಂದಾಗ.. ಅಯ್ಯೋ ಮೇಡಂ ಅವರೇ ನೀವು ದೇಶಕ್ಕೇ ಲೆಕ್ಕ ಹೇಳೋರು. ಮತ್ತೆ ಎಲ್ಲವನ್ನೂ ನೀವೇ ನೋಡಿಕೊಳ್ಳೋರು ನೀವೇ ಹೀಗಂದರೆ ಹೇಗೆ? ಎಂದು ಪ್ರಶ್ನೆ ಹಾಕಿದ. ಹಂಗಲ್ಲ ಮಾರಾಯ… ಕೇಳಿಲ್ಲೆ… ಮೊನ್ನೆ ಪಕ್ಕದ ಮನೆ ಪದ್ದಕ್ಕನ ಹತ್ತಿರ ಒಂದು ಲೋಟ ತೊಗರಿಬೇಳೆ ಇಸಿದುಕೊಂಡು ಬಂದು ಸಾಂಬಾರ್ ಮಾಡಿದ್ದೆ ಅಂತಹ ಪರಿಸ್ಥಿತಿ ನಂದು, ನನ್ನ ಕಡೆ ಎಲ್ಲಿದೆ ದುಡ್ಡು ಅಂದಾಗ… ಮೇಡಮ್ಮೋರೆ ಹಾಗೆಲ್ಲ ಅನಬೇಡಿ ಅಶ್ವಿನಿ ದೇವತೆಗಳು ಯಾವಾಗಲೂ ತಥಾಸ್ತು ಅಂತಿರ್ತಾರಂತೆ. ನೀವು ಹಣವಿಲ್ಲ ಅಂದಾಗ ಅವರು ತಥಾಸ್ತು ಅಂದರೆ ಏನು ಮಾಡುತ್ತೀರಿ? ಹೋಗಲಿ ಬಿಡಿ ನಾನ್ಯಾಕೆ ಅಡ್ಡ ಬರಲಿ? ನಿಮ್ಮ ಮರ್ಜಿ ಎಂದು ತಿಗಡೇಸಿ ಫೋನಿಟ್ಟಾಗ ನಿಮ್ಮಕ್ಕ ತಲೆಮೇಲೆ ಕೈ ಇಟ್ಟುಕೊಂಡು ಅರಾಂ ಕುರ್ಚಿಯ ಮೇಲೆ ಕುಳಿತರು.