ನನಗೆ ನನ್ನದೆಯಾದ ಶಕ್ತಿಯಿದೆ : ಬಿ.ಎಸ್. ಯಡಿಯೂರಪ್ಪ

ಯಡಿಯೂರಪ್ಪ
Advertisement

ಕೊಪ್ಪಳ: ನನಗೆ ನನ್ನದೇ ಆದ ಶಕ್ತಿಯಿದೆ. ಹಗಲು ರಾತ್ರಿ ಕಷ್ಟಪಟ್ಟು ದುಡಿದು ಬಿಜೆಪಿ ಕಟ್ಟಿದವರಲ್ಲಿ ನಾನೂ ಪ್ರಮುಖ. ಅದು ಎಲ್ಲರಿಗೂ ಗೊತ್ತು. ನನ್ನನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಡ್ಡಾ ಅವರು ಕೊಪ್ಪಳಕ್ಕೆ ಬರ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ.
ನನ್ನನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವುದಕ್ಕೆ ಅರ್ಥವಿಲ್ಲ ಎಂದರು. ಜನಾರ್ದನ ರೆಡ್ಡಿ ನನ್ನನ್ನು ಭೇಟಿಯಾಗಿದ್ದಾರೆ. ನನ್ನೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ನಮ್ಮ ಜೊತೆಗೇ ಇರುತ್ತಾರೆ. ಅವರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆ ಇಲ್ಲ. ಅವರ ಮೇಲೆ ಕೆಲವು ಸಣ್ಣಪುಟ್ಟ ಪ್ರಕರಣಗಳಿದ್ದು, ಇತ್ಯರ್ಥವಾದ ಮೇಲೆ ಬಿಜೆಪಿಗೆ ಬರುತ್ತಾರೆ. ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿರುವ ಕಾರಣಕ್ಕೆ ಗೊಂದಲ ಸೃಷ್ಟಿಯಾಗಿದೆ. ಪಕ್ಷಕ್ಕೆ ಬಂದ ಮೇಲೆ ಸ್ಪರ್ಧೆ ಎಲ್ಲಿ ಎನ್ನುವ ಬಗ್ಗೆ ತೀರ್ಮಾನಿಸುತ್ತೇವೆ. ಪಕ್ಷ ಕಟ್ಟಲು ಅವರು ಸಹಕರಿಸುತ್ತಾರೆ. ಪಕ್ಷದ ಮುಖಂಡರು ಕೂಡಾ ಜನಾರ್ದನ ರೆಡ್ಡಿ ಅವರ ಪರವಾಗಿದ್ದಾರೆ. ಮುಂದೆ ಯಾವ ಗೊಂದಲಗಳಿಲ್ಲದೇ ರೆಡ್ಡಿ ಅವರನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಪ್ರಿಯಾಂಕ್ ಖರ್ಗೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ ಎಂದಿದ್ದು ಸರಿಯಲ್ಲ. ಕಾಂಗ್ರೆಸ್ ನವರು ತಮ್ಮ ಮನೆ ಸರಿ ಮಾಡಿಕೊಳ್ಳದೇ ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ನನಗೆ ಅಧಿಕಾರದ ಆಸೆ ಇಲ್ಲ ಎಂದು ಹೇಳಿದ್ದಾರೆ.