ನದಿಗಳ ಜೋಡಣೆಗೆ ರಾಜ್ಯಗಳ ಅಸಹಕಾರ: ಗಡ್ಕರಿ

Advertisement

ಸಂಕೇಶ್ವರ: ಗೋದಾವರಿ, ಕೃಷ್ಣಾ, ಕಾವೇರಿ ನದಿ ಜೋಡಣೆಗಾಗಿ ಮಹರಾಷ್ಟ್ರ, ಕರ್ನಾಟಕ, ತಮಿಳುನಾಡು ರಾಜ್ಯ ಸರಕಾರಗಳ ಸಭೆ ಕರೆದು ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರು ಸದ್ವಿನಿಯೋಗಕ್ಕೆ ಚಿಂತಿಸಿದ್ದೆ. ಆದರೆ ಕೆಲ ರಾಜ್ಯಗಳ ಅಸಹಕಾರದಿಂದ ಈ ಯೋಜನೆ ಸಾಕಾರಗೊಂಡಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ನೇಸರಿ ಗಾರ್ಡನ್‌ನಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಬೇಕಾದರೆ ಹೊಸ ಅವಿಷ್ಕಾರಗಳ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಬ್ಬಿನ ಉಪ ಉತ್ಪನ್ನವಾಗಿ ಸಕ್ಕರೆ ಜೊತೆಗೆ ಇಥೆನಾಲ್, ಬಯೋಗ್ಯಾಸ್ ಉತ್ಪಾದನೆಗಳತ್ತ ಗಮನ ಹರಿಸಿದರೆ ಮಾತ್ರ ಭವಿಷ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಉಳಿಯಲಿವೆ. ಬ್ರೆಜಿಲ್‌ನಲ್ಲಿ ಸಕ್ಕರೆ ದರ 24 ಇದ್ದು, ಭಾರತದಲ್ಲೂ ಪ್ರತಿ ವರ್ಷ 80 ಲಕ್ಷ ಮೆ. ಟನ್ ಸಕ್ಕರೆ ಹೆಚ್ಚಾಗಿ ಉತ್ಪಾದನೆಯಾಗುತ್ತಿದ್ದು, ಸಕ್ಕರೆ ಉತ್ಪಾದನೆ ಕಡಿಮೆಗೊಳಿಸಿ ಉಪ ಉತ್ಪನ್ನಗಳತ್ತ ಗಮನ ಹರಿಸಬೇಕೆಂದರು.