ಬೆಳಗಾವಿ: ಅದೊಂದು ಕಾಲವಿತ್ತು ಬೆಳಗಾವಿ ಮಹಾನಗರ ಪಾಲಿಕೆಯ ನಗಸೇವಕರು ವಾರ್ಡುಗಳಿಗೆ ಹೋಗಿ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡುವುದು ಅಪರೂಪ ಎನ್ನಲಾಗುತ್ತಿತ್ತು. ಇನ್ನು ವಾರ್ಡ್ ಗಳಿಗೆ ಖುದ್ದು ಕೆಲಸ ಮಾಡುವುದು ತೀರಾ ಅಪರೂಪ.
ಆದರೆ ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ ನಂಬರ 43 ರ ಬಿಜೆಪಿ ನಗರಸೇವಕಿ ಖುದ್ದು ಕೆಲಸಕ್ಕಿಳಿದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಕುಡಿಯುವ ನೀರಿನ ಹಾಹಾಕಾರವಿದೆ. ಶಾಸಕ ಅಭಯ ಪಾಟೀಲರ ಸಹಕಾರದಿಂದ ಪ್ರತಿಯೊಬ್ಬರಿಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ನೀರು ಬಳಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕಳೆದ ದಿನ ಭಾಗ್ಯನಗರದ ಮೊದಲನೇ ಕ್ರಾಸ್ ಬಳಿ ಗಟಾರು ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಅಲ್ಲಿರುವ ಕುಡಿಯುವ ನೀರಿನ ಪೈಪ್ ಸಂಜೆ ಒಡೆದುಹೋಗಿದೆ.
ಈ ಸಂದರ್ಭದಲ್ಲಿ ಅಲ್ಲಿರುವ ಜನ ಗಟಾರು ನಿರ್ಮಾಣ ಮಾಡುವವರಿಗೆ ಅದನ್ನು ಸರಿ ಮಾಡುವಂತೆ ಹೇಳಿದ್ದರು. ಆದರೆ ಅವರು ಆಯ್ತು ಅಂದರೂ ಕೂಡ ನೀರು ಸೋರಿಕೆ ಬಂದ್ ಮಾಡುವ ಗೋಜಿಗೆ ಹೋಗಲಿಲ್ಲ. ಕೊನೆಗೆ ಈ ವಿಷಯವನ್ನು ತಡರಾತ್ರಿ ಕೆಲವರು ನಗರಸೇವಕಿ ವಾಣಿ ಜೋಶಿ ಅವರ ಗಮನಕ್ಕೆ ತಂದರು. ಆಗ ಅವರೂ ಕೂಡ ಸಂಬಂಧಿಸಿದ ಗುತ್ತಿಗೆದಾರನಿಗೆ ಸುದ್ದಿ ಮುಟ್ಟಿಸಿ ತಕ್ಷಣ ನೀರು ಸೋರಿಕೆ ಬಂದ್ ಮಾಡುವಂತೆ ಹೇಳಿದರು. ಆದರೆ ಯಾವುದೂ ಪ್ರಯೋಜನವಾಗಲಿಲ್ಲ.
ಕೊನೆಗೆ ನಗರ ಸೇವಕರೇ ಖುದ್ದು ಸ್ಥಳಕ್ಕೆ ಹೋಗಿ ತಾವೇ ಗಟಾರಿನಲ್ಲಿ ಇಳಿದು ನೀರು ಸೋರಿಕೆಯನ್ನು ತಡೆಗಟ್ಟುವ ಕೆಲಸ ಮಾಡಿದರು. ನಗರಸೇವಕರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಾಸಕ ಅಭಯ ಪಾಟೀಲರೂ ಸಹ ನಗರಸೇವಕರ ಜನಪರ ಕಾರ್ಯವನ್ನು ಪ್ರಶಂಸಿಸಿದ್ದಾರೆ.