ಹುಬ್ಬಳ್ಳಿ: ಸೋಮವಾರ ಸಂಜೆ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಯಿತು. ಬೆಳಿಗ್ಗೆಯಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ಜನ ಸಂಜೆ ಮೋಡ ಮುಸುಕಿದ ವಾತಾವರಣ ಕಂಡರು. ಬಳಿಕ ಶುರುವಾಗಿದ್ದು ಮಳೆಯ ಆರ್ಭಟ. ಈ ಆರ್ಭಟಕ್ಕೆ ಜಿಲ್ಲೆಯ ಗ್ರಾಮೀಣ ಜನರು ತತ್ತರಿಸಿದರು.
ಜಿಲ್ಲೆಯ ಕುಂದಗೋಳ, ನವಲಗುಂದ, ಅಳ್ನಾವರ, ಕಲಘಟಗಿ ತಾಲೂಕುಗಳಲ್ಲಿ ಮಳೆ ರಭಸದಿಂದ ಸುರಿದಿದೆ. ಧಾರವಾಡ, ನವಲಗುಂದ ಭಾಗದಲ್ಲಿನ ತುಪ್ಪರಿ ಹಳ್ಳ ಹಾಗೂ ಬೆಣ್ಣೆ ಹಳ್ಳಗಳ ಒಳ ಹರಿವು ಹೆಚ್ಚಿದೆ.
ವಿಶೇಷವಾಗಿ ಕುಂದಗೋಳ ತಾಲ್ಲೂಕಿನ ಯರೇಬೂದಿಹಾಳ, ಹಿರೇಹರಕುಣಿ, ಚಿಕ್ಕನೆರ್ತಿ, ಹಿರೇನೆರ್ತಿ, ತರ್ಲಘಟ್ಟ, ಚಾಕಲಬ್ಬಿ, ಗೌಡಗೇರಿ, ಗುಡಗೇರಿ, ಗುಂಜಳ, ಪಶುಪತಿಹಾಳ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಗ್ರಾಮಸ್ಥರನ್ನು ಹೈರಾಣಾಗಿಸಿತು.
ಸಂಜೆ 6ಕ್ಕೆ ಗುಡುಗು-ಸಿಡಿಲ ಅಬ್ಬರದೊಂದಿಗೆ ಮಳೆ ಸುರಿಯಲು ಆರಂಭಿಸಿತು. ನಾಲ್ಕು ತಾಸಿಗೂ ಹೆಚ್ಚು ಹೊತ್ತು ಮಳೆ ಒಂದೇ ಸಮನೆ ಮಳೆ ಸುರಿಯಿತು, ಮಳೆಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿ, ವಿದ್ಯಾನಗರಿ ಧಾರವಾಡ ಸೇರಿದಂತೆ ಜಿಲ್ಲೆಯ ನಗರ ಪಟ್ಟಣಗಳ ರಸ್ತೆಯ ತಗ್ಗು-ಗುಂಡಿಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಸ್ತವ್ಯಸ್ಥವಾಗಿದ್ದು ಕಂಡಿತು. ವಾಹನ ಸವಾರರು ಪರದಾಡಿದರು.
ಜೊತೆಗೆ ತಗ್ಗು ಪ್ರದೇಶಗಳಲ್ಲಿಯ ನಿವಾಸಿಗಳು ಮನೆಯೊಳಕ್ಕೆ ನೀರು ಹೋಗುತ್ತಿದ್ದಂತೆ ಮೊದಲು ನೀರು ಹೊರಹಾಕಲು ಸಾಕಷ್ಟು ಪ್ರಯಾಸ ಪಟ್ಟರು. ಪಾದಾಚಾರಿಗಳು ಮಳೆಯಲ್ಲೇ ತೊಯ್ದು ತಾವು ಸೇರಬೇಕಾದ ಸ್ಥಳ ಸೇರಿಕೊಂಡರು.