ಮಹಾಭಾರತದಲ್ಲಿ ಧರ್ಮವ್ಯಾಧನೆಂಬ ಬೇಡನು ಕೌಶಿಕನೆಂಬ ಬ್ರಾಹ್ಮಣನಿಗೆ ಉಪದೇಶ ಮಾಡಿದ ಸಂದರ್ಭ ವರ್ಣಿಸಲ್ಪಟ್ಟಿದೆ. ವೃತ್ತಿಯಲ್ಲಿ ಬೇಡನಾಗಿದ್ದರೂ ಧರ್ಮದ ಅರಿವಿನಲ್ಲಿ ಅವನು ಪ್ರಾತಃಸ್ಮರಣೀಯ ಪರಮಪೂಜನೀಯನೇ ಸರಿ. ಅವನ ಮಾತುಗಳನ್ನು ಕೇಳಿದಾಗ ಇದು ಸ್ಪಷ್ಟವಾಗುತ್ತದೆ. ಕುಳಿತು ಗ್ರಂಥಗಳನ್ನು ಓದದೆ, ತನ್ನ ಧರ್ಮಾಚರಣೆ ಅಥವಾ ತಪಸ್ಸಿನಿಂದಲೇ ಅವನಿಗೆ ಉಂಟಾದ ಅರಿವಿನಿಂದ ಬಂದ ಮಾತುಗಳನ್ನು ಮಾರ್ಕಂಡೇಯ ಮಹರ್ಷಿಗಳು ಯುಧಿಷ್ಠಿರನಿಗೆ ಹೇಳಿದ್ದಾರೆ. ಜನಕಮಹಾರಾಜನೆಂಬ ಪ್ರಸಿದ್ಧ ರಾಜರ್ಷಿ ಮಿಥಿಲಾ ಪಟ್ಟಣದಲ್ಲಿ ರಾಜನಾಗಿದ್ದ ಕಾಲದಲ್ಲಿಯೇ ಧರ್ಮವ್ಯಾಧನು ಇದ್ದನು. ಧರ್ಮವ್ಯಾಧನು ತನ್ನ ಮಾತಿನಲ್ಲಿ ಜನಕ ಮಹಾರಾಜನನ್ನು ಶ್ರದ್ಧೆಯಿಂದ ಉಲ್ಲೇಖಿಸುತ್ತಾನೆ. ಅಂತಹ ಧರ್ಮವ್ಯಾಧನ ಮುಖದಿಂದ ಬಂದ ಒಂದು ಸಂಗತಿಯನ್ನು ಇಲ್ಲಿ ಚಿಂತನೆ ಮಾಡೋಣ.
ಇಂದ್ರಿಯಗಳ ಸಂಯಮವೇ ಸ್ವರ್ಗ, ಇಂದ್ರಿಯಗಳನ್ನು ಯಥೇಷ್ಚವಾಗಿ ಹರಿಯಲು ಬಿಡುವಿಕೆಯೇ ನರಕ. ಇಂದ್ರಿಯಾಣ್ಯೇವ ತತ್ಸರ್ವಂ ಯತ್ಸ್ವರ್ಗ ನರಕಾವುಭೌ | ನಿಗೃಹೀತೇ ವಿಸೃಷ್ಟಾನಿ ಸ್ವರ್ಗಾಯ ನರಕಾಯ ಚ||' ಇಂದ್ರಿಯಗಳನ್ನು ನಿಗೃಹಿಸಿದರೆ ಅವುಗಳು ನಮ್ಮನ್ನು ಸ್ವರ್ಗಕ್ಕೆ ಒಯ್ಯುತ್ತವೆ. ಅವುಗಳನ್ನು ಯಥೇಷ್ಚವಾಗಿ ಹರಿಬಿಟ್ಟರೆ ಅವುಗಳೇ ನಮ್ಮನ್ನು ನರಕಕ್ಕೆ ತಲುಪಿಸುತ್ತವೆ. ಶರೀರವೆಂಬ ರಥಕ್ಕೆ ಇಂದ್ರಿಯಗಳೆಂಬ ಕುದುರೆಗಳು ಕಟ್ಟಲ್ಪಟ್ಟಿವೆ. ಆತ್ಮನೆ (ತಾನೇ) ಆ ಕುದುರೆಗಳನ್ನು ನಿಯಂತ್ರಿಸುವವ ಇಂದ್ರಿಯಗಳು ಪ್ರಮಾದವನ್ನು ಎಸಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆತನದ್ದು. ಇಂದ್ರಿಯಗಳು ಸುಲಭಕ್ಕೆ ನಿಯಂತ್ರಣಕ್ಕೆ ಬರುವುದಿಲ್ಲ. ಪರಿಣತ ಸಾರಥಿಯು ಕುದುರೆಗಳನ್ನು ನಿಯಂತ್ರಿಸಬಲ್ಲ. ಪರಿಣತಿಯಿಲ್ಲದ ಸಾರಥಿಯು ಕುದುರೆಗಳನ್ನು ನಿಯಂತ್ರಿಸಲಾರ. ಹಾಗೆಯೇ ತಪಸ್ಸೆಂಬ ಸಾಧನೆಯನ್ನು ತನ್ನದಾಗಿಸಿಕೊಂಡ ಆತ್ಮನು ಇಂದ್ರಿಯಗಳನ್ನು ನಿಯಂತ್ರಿಸಬಲ್ಲ. ಇಂದ್ರಿಯಗಳನ್ನು ಸಂಯಮನಗೊಳಿಸುವ ಮೂಲಕವೇ ಧ್ಯಾನವೆಂಬ ತಪಸ್ಸು ಉಂಟಾಗುತ್ತದೆ. ಇಂದ್ರಿಯಗಳ ಸಂಯಮವಿಲ್ಲದಿದ್ದರೆ ಧ್ಯಾನ ಉಂಟಾಗುವುದೇ ಇಲ್ಲ. ಯಾಕೆಂದರೆ ನಿಯಂತ್ರಣವಿಲ್ಲದ ಇಂದ್ರಿಯಗಳು ಸ್ವ ಇಚ್ಛೆಯಾಗಿ ಹರಿದುಹೊಗುವಾಗ ಮನಸ್ಸಿನ ಪ್ರಜ್ಞಾಶಕ್ತಿಯನ್ನು ತೆಗೆದುಕೊಂಡೇ ಹೋಗುತ್ತವೆ.
ಇಂದ್ರಿಯಾಣಾಂ ವಿಚರತಾಂ ಯನ್ಮನೋನುವಿಧೀಯತೇ | ತದಸ್ಯ ಹರತೇ ಬುದ್ಧಿಂ ನಾವಂ ವಾಯುರಿವಾಂಭಸಿ||’ ನೀರಿನಲ್ಲಿರುವ ನಾವೆಯನ್ನು ಗಾಳಿಯು ತನಗಿಷ್ಟ ಬಂದ ಕಡೆ ತೇಲಿಸಿಕೊಂಡು ಹೋಗುವಂತೆ ಇಂದ್ರಿಯಗಳು ಪ್ರಜ್ಞೆಯನ್ನು ತೆಗೆದುಕೊಂಡು ಹೋಗುತ್ತವೆ. ಪ್ರಜ್ಞೆ ಹೀಗೆ ಹರಿದು ಹೋಗುತ್ತಿದ್ದರೆ ಧ್ಯಾನದ ಸ್ಥಿತಿ ಉಂಟಾಗುವ ಸಂಭವವಿಲ್ಲ. ಆದ್ದರಿಂದ ಇಂದ್ರಿಯ ಸಂಯಮದಿಂದಲೇ ಧ್ಯಾನ. ಇಂತಹ ಧ್ಯಾನದಿಂದಲೇ ಸ್ವರ್ಗ. ಅಂದರೆ ಪರಮೋಚ್ಛ ಸುಖ.
ಇಂದ್ರಿಯಗಳು ಹರಿದುಹೊಗುತ್ತಿದ್ದರೆ ಅದರಿಂದಲೇ ನರಕ. ಐಹಿಕ ಮತ್ತು ಪಾರಲೌಕಿಕ ಎಂಬುದಾಗಿ ನರಕವು ಎರಡು ವಿಧ. ಇಂದ್ರಿಯಗಳ ಸ್ವ ಇಚ್ಛಾ ಪ್ರವೃತ್ತಿಯು ಶರೀರ ಮನಸ್ಸುಗಳನ್ನು ದುರ್ಬಲಗೊಳಿಸುವ ಮೂಲಕ ರೋಗಗಳನ್ನು ಉಂಟುಮಾಡುತ್ತದೆ. ಇದೇ ಐಹಿಕ ನರಕ. ಅದೇ ಸ್ವೇಚ್ಛಾ ಪ್ರವೃತ್ತಿಯು ಆಸೆಗಳನ್ನು ಬೆಳೆಸುವ ಮೂಲಕ ಪಾಪ ಕೃತ್ಯಗಳಲ್ಲಿ ನಮ್ಮನ್ನು ತೊಡಗಿಸುತ್ತದೆ. ಪಾಪದಿಂದ ಪಾರಲೋಕ ನರಕಪ್ರಾಪ್ತಿ. ಇಹ ಪರಗಳಲ್ಲಿ ಸುಖಿ ಆಗಬೇಕೆಂದಿದ್ದರೆ ಇಂದ್ರಿಯಗಳ ಸಂಯಮ ಸಾಧಿಸಿಕೊಳ್ಳಬೇಕು. ಅದಕ್ಕೆ ಆಸನ, ಪ್ರಾಣಾಯಾಮ,ಆಹಾರ ನಿಯಮ,ಭಕ್ತಿ,ಕರ್ಮ ಇವುಗಳೆಲ್ಲವೂ ಬೇಕು. ಎಲ್ಲಕ್ಕಿಂತ ಮೊದಲು ಇಂದ್ರಿಗಳ ಸಂಯಮ ಸಾಧಿಸಿಕೊಳ್ಳಬೇಕೆಂಬ ಅಚಲ ನಿರ್ಧಾರ ಬೇಕು.