ಚಿಕ್ಕಮಗಳೂರು: ಇಂದಿನ ವಿದ್ಯಮಾನದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಭಯೋತ್ಪಾದನೆ ನಡೆಯುತ್ತಿದೆ. ಇಂತಹ ಕುಕೃತ್ಯದಲ್ಲಿ ತೊಡಗಿರುವ ಜನರ ಮನವನ್ನು ಹಿಂಸೆಯಿಂದ ಧರ್ಮದೆಡೆಗೆ ಮನ:ಪರಿವರ್ತನೆ ಮಾಡಬೇಕಿದ್ದು, ಧರ್ಮಗುರುಗಳಿಂದ ಮಾತ್ರ ಈ ಕಾರ್ಯ ಸಾಧ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರ ನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ 51 ಅಡಿ ಎತ್ತರದ ರೇಣುಕಾಚಾರ್ಯ ಅವರ ಮೂರ್ತಿ ಕಾರ್ಯಾರಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ಸಾಮರಸ್ಯ :
ಉತ್ತರ ಭಾರತದಲ್ಲಿ ಕಾಶಿ ಕ್ಷೇತ್ರವಿದ್ದಂತೆ, ದಕ್ಷಿಣದಲ್ಲಿ ರಂಭಾಪುರಿ ಇರುವುದು ನಮ್ಮ ಸುದೈವ. ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶಗಳು , ಸಂಸ್ಕಾರ, ಸಂಸ್ಕೃತಿಗಳು ನಮ್ಮೆಲ್ಲರ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂದು ಶ್ರೀಗುರುಗಳು ಪ್ರತಿಪಾದಿಸಿದರು.ಆತ್ಮಸಾಕ್ಷಿಯಂತೆ , ಸತ್ಯದ ದಾರಿಯಲ್ಲಿ ನಡೆದುಕೊಳ್ಳುವವರು ನಿಜವಾದ ಮಾನವರು. ಸಿದ್ಧಾರ್ಥ ಶಿಖಾಮಣಿಯ ವಿಧಿವಿಧಾನಗಳು ಮನಸ್ಸನ್ನು ಹತೋಟಿಯಲ್ಲಿರಿಸಲು ದಾರಿ ತೋರುತ್ತದೆ. ಇವೆರಡನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಜಾತಿಮತಗಳ ಭೇದಗಳನ್ನು ತೊಡೆದುಹಾಕಲು ಹಾಗೂ ಸಮಾಜದಲ್ಲಿ ಸಾಮರಸ್ಯ ನೆಲೆಸಲು ನಿರಂತರವಾದ ಅಭಿಯಾನವನ್ನು ಕೈಗೊಳ್ಳುತ್ತಿದ್ದಾರೆ. ರಂಭಾಪುರಿ ಶ್ರೀಗಳು ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ :
ಧರ್ಮದ ವಿಚಾರಗಳನ್ನು ಜಾಗೃತಗೊಳಿಸುವಲ್ಲಿ ಪರಮಪೂಜ್ಯ ಜಗದ್ಗುರುಗಳು ಮಹತ್ವದ ಪಾತ್ರ ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾತಿಮತ ಬೇಧವಿಲ್ಲದೇ ರಂಭಾಪುರಿ ಪೀಠದ ಅಭಿವೃದ್ಧಿಗಾಗಿ ಅನುದಾನ, ಕಾಗಿನೆಲೆ ಗುರುಪೀಠ ಅಭಿವೃದ್ಧಿ ಪ್ರಾಧಿಕಾರ, ಕನಕದಾಸರ ಹುಟ್ಟೂರಾದ ಬಾಡಾ ಅಭಿವೃದ್ಧಿ, ಹಜ್ ಭವನಕ್ಕೆ 40 ಕೋಟಿ ಅನುದಾನ ನೀಡಿದ್ದಾರೆ. ಮಠಮಾನ್ಯಗಳು ಶಿಕ್ಷಣ, ಅನ್ನ ದಾಸೋಹ, ಆಶ್ರಯಾದಿಗಳನ್ನು ನೀಡಿ, ರಾಜ್ಯದ ಅಭಿವೃದ್ಧಿಗೆ ಕಾರಣವಾಗಿವೆ ಎಂದರು.
ಧರ್ಮದಿಂದಲೇ ವಿಶ್ವಶಾಂತಿ :
ಧರ್ಮದಿಂದಲೇ ವಿಶ್ವಶಾಂತಿ ಎಂಬುದನ್ನು ಎಲ್ಲರೂ ಅರಿಯಬೇಕು. ಸಮಾನ ಅವಕಾಶಗಳನ್ನು ನೀಡುವ ಸಮಾಜ ನಿರ್ಮಾಣ ಮಾಡೋಣ.45 ವರ್ಷಗಳ ಸುದೀರ್ಘ ಹಾಗೂ ನಿಸ್ವಾರ್ಥ ಜನಸೇವೆ ಸಲ್ಲಿಸಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸಮಂಜಸವಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ.ಸಿ ಪಾಟೀಲ್, ಶಾಸಕ ಸಿ.ಟಿ. ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮತ್ತಿತರರು ಉಪಸ್ಥಿತರಿದ್ದರು.