ಮಂಗಳೂರು: ದುಂದುವೆಚ್ಚಕ್ಕೆ ಕಡಿವಾಣ ಹಾಕಿಕೊಂಡು, ಸರಳ ಜೀವನ ಅಳವಡಿಸಿಕೊಂಡು ಸಮಾಜದ ಶಾಶ್ವತ ಕಾರ್ಯಗಳಿಗೆ ಧರ್ಮಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.
ಮಾಣಿ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸರಳ ಜೀವನದಲ್ಲಿರುವ ಸುಖ-ಶ್ರೇಯಸ್ಸು ಯಾವುದರಲ್ಲೂ ಇಲ್ಲ. ಒಂದು ತುತ್ತು ಕಡಿಮೆ ಉಂಡು ಅದನ್ನು ಸಮಾಜಕ್ಕೆ ನೀಡಿ ಎಂಬ ಪರಿಕಲ್ಪನೆಯಡಿ ಮುಷ್ಟಿಭಿಕ್ಷೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಮುಖ್ಯ ಅತಿಥಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, “ನಮ್ಮ ಸನಾತನ ಧರ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಲ್ಲಿ ಭಾರತೀಯ ಗುರುಪರಂಪರೆ, ಗುರುತತ್ವ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳು ಧರ್ಮದ ಉಳಿವಿಗೆ ಮಾಡಬೇಕಾದ ಕಾರ್ಯವನ್ನು ಮಾಡುತ್ತಿಲ್ಲ. ಸನಾತನ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ಆಗದಿದ್ದರೆ ಮುಂದಿನ ಪೀಳಿಗೆಗೆ ಕೊಡಲಿಯೇಟು ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರದಿಂದ ಯಾವ ನೆರವೂ ಇಲ್ಲದಿದ್ದರೂ ರಾಮಚಂದ್ರಾಪುರ ಮಠದಂಥ ಸಂಸ್ಥೆಗಳು ಈ ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯಾರ್ಹ” ಎಂದರು.
ಮನುಷ್ಯನನ್ನು ಎತ್ತಿಹಿಡಿಯುವುದು ಧರ್ಮ ಮಾತ್ರ. ಕುಟುಂಬದಲ್ಲಿ ಧರ್ಮಾಚರಣೆ ಅಳವಡಿಸಿಕೊಳ್ಳುವವರೆಗೂ ಆ ಕುಟುಂಬ ಬೆಳೆಯಲಾರದು. ಎಲ್ಲ ಧರ್ಮವನ್ನೂ ಗೌರವಿಸುವ ವೈಶಾಲ್ಯ ಇರುವುದು ಸನಾತನ ಹಿಂದೂ ಧರ್ಮದಲ್ಲಿ ಮಾತ್ರ. ಗುರುತತ್ವದಲ್ಲಿ ಅಚಲ ನಂಬಿಕೆ ಇರಿಸಿಕೊಂಡು ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತದ ಕುಟುಂಬ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿ. ಭಾರತದ ವಿಶೇಷತೆ ಅಡಗಿರುವುದು, ನಮ್ಮ ಸನಾತನ ಹಿಂದೂ ಧರ್ಮ ಉಳಿದುಕೊಂಡಿರುವುದು ಈ ಕುಟುಂಬ ವ್ಯವಸ್ಥೆಯಿಂದಾಗಿ. ದೇವಾಲಯ, ಮಂದಿರಗಳಷ್ಟೇ ಕುಟುಂಬ ವ್ಯವಸ್ಥೆಯೂ ಮುಖ್ಯ. ನಮ್ಮ ಪೂರ್ವಜರು ಸಹಸ್ರಮಾನಗಳಿಂದ ಇದನ್ನು ಉಳಿಸಿಕೊಂಡು ಬಂದಿದ್ದಾರೆ. ಬ್ರಿಟಿಷರು, ಮೊಗಲರು ಶ್ರದ್ಧಾ ಭಕ್ತಿ ಕೇಂದ್ರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದರೂ, ಕುಟುಂಬ ವ್ಯವಸ್ಥೆ ನಾಶಗೈಯಲು ಸಾಧ್ಯವಾಗಲಿಲ್ಲ. ಇಂಥ ಪವಿತ್ರ ವ್ಯವಸ್ಥೆ ನಮ್ಮಲ್ಲಿ ಉಳಿದುಕೊಂಡಿದ್ದೇವೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, “ಶಂಕರಾಚಾರ್ಯರು ನಿರ್ಮಿಸಿದ ಇತಿಹಾಸವನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಮತ್ತೆ ಸೃಷ್ಟಿಸುತ್ತಿದ್ದಾರೆ. ಭಕ್ತಿಯ ಅದ್ಭುತ ಶ್ರದ್ಧಾಕೇಂದ್ರವಾಗಿ ಮಾಣಿ ಮಠ ಬೆಳೆದಿದೆ ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಸಚಿವ ಎಸ್. ಅಂಗಾರ ಮೊದಲಾದವರಿದ್ದರು.