ವಿಶ್ವವು ಎಲ್ಲರನ್ನೂ ಏಕೆ ಸಮಾನವಾಗಿ ಸೃಷ್ಟಿಸಿಲ್ಲ? ಕೆಲವು ಅಂಗವಿಕಲರು, ಅಸಮರ್ಥರು. ಕೆಲವರೇಕೆ ಸಮರ್ಥರಾಗಿದ್ದಾರೆ? ಈ ಎಲ್ಲಾ ಅಸಮಾನತೆಯ ಅರ್ಥವೇನು? ‘ನೋವು’ ಮತ್ತು ‘ಸಂಕಟ’ದ ನಡುವಿನ ವ್ಯತ್ಯಾಸ-ನೋವು ದೈಹಿಕ; ಸಂಕಟ ಮಾನಸಿಕ. ನೋವು ಉಪಯುಕ್ತ ಮತ್ತು ಎಚ್ಚರಿಕೆಯ ಕರೆಗಂಟೆ; ಸಂಕಟ ನಮ್ಮಿಂದಲೇ ಉತ್ಪತ್ತಿಯಾಗುತ್ತದೆ. ನೋವು ಅನುಭವಿಸುವ ಬಗ್ಗೆ ನಮಗೆ ಆಯ್ಕೆಯಿಲ್ಲ; ಆದರೆ ಸಂಕಟಪಡದಿರುವಂತೆ ಆಯ್ಕೆಯಿದೆ. ಒಬ್ಬರು ಮಹಲಿನಲ್ಲಿ ವಾಸಿಸುತ್ತಾರೆ; ಇನ್ನೊಬ್ಬರು ಸಣ್ಣಮನೆಯಲ್ಲಿ ವಾಸಿಸುತ್ತಾರೆ. ಮನೆಯಲ್ಲಿ ವಾಸಿಸುವವರ ಸಂಕಟದ ಮೂಲವೇ ಇದು. ಒಬ್ಬರಲ್ಲಿ ಮೂರು ಕಾರುಗಳಿವೆ; ಇನ್ನೊಬ್ಬರಲ್ಲಿ ಒಂದೇ ಇದೆ. ಒಂದೇ ಕಾರು ಇರುವವರ ಸಂಕಟದ ಮೂಲವೇ ಇದು. ದುಃಖವನ್ನು ಪರಿಸ್ಥಿತಿ ಉಂಟುಮಾಡುವುದಿಲ್ಲ; ಬದಲು ನಾವು ಅದಕ್ಕೆ ಪ್ರತಿಕ್ರಿಯಿಸುವ ರೀತಿಯೇ ಸಂಕಟವನ್ನು ಸೃಷ್ಟಿಸುತ್ತದೆ.
ದೇಹ, ಮನಸ್ಸು, ಚೈತನ್ಯಗಳೊಡನೆಯ ಪ್ರತಿಯೊಂದು ನಡವಳಿಕೆ ಒಂದು ನಿರ್ಧಿಷ್ಟ ಮಾದರಿಯನ್ನು ಅಚ್ಚೊತ್ತುತ್ತದೆ. ಕಾಲಾಂತರದಲ್ಲಿ ಈ ಮಾದರಿಗಳೇ ಸ್ವಯಂಪ್ರವೃತ್ತಿಗಳಾಗಿ ರೂಪುಗೊಳ್ಳುತ್ತವೆ. ಈ ಪ್ರವೃತ್ತಿಯೇ ‘ವಾಸನೆ’. ಈ ವಾಸನೆಯ ಹೊರಸೂಸುವಿಕೆಗೆ ಅನುಗುಣವಾಗಿ ವ್ಯಕ್ತಿಯ ಬದುಕಿನಲ್ಲಿ ಸನ್ನಿವೇಶಗಳು ಘಟಿಸುತ್ತವೆ. ಒಂದು ಹೂವನ್ನು ಗಮನಿಸಿ. ಹೂವಿಗೆ ತನ್ನದೇ ಆದ ವಿಶಿಷ್ಠ ಸುಗಂಧವಿದೆ; ಹೂವಿಗೆ ತನ್ನದೇ ಆದ ಇಚ್ಛೆಯಿರುವುದಿಲ್ಲ. ಆದರೆ ಅದರ ಸುಗಂಧ ಇತರೆಲ್ಲವನ್ನೂ ತನ್ನೆಡೆಗೆ ಆಕರ್ಷಿಸುತ್ತದೆ. ಹಾಗೆಯೇ ಕರ್ಮವೂ. ಕರ್ಮಕ್ಕೂ ತನ್ನದೇ ಆದ ಇಚ್ಛೆಯಿಲ್ಲ; ಆದರೆ ತನ್ನ ವಾಸನೆಗೆ ಅನುಗುಣವಾಗಿ ಸಂದರ್ಭಗಳನ್ನು ಆಕರ್ಷಿಸುತ್ತದೆ. ನಮ್ಮ ಭೌತಿಕದೇಹದ ಮೇಲೆ ನಾವು ನಿಯಂತ್ರಣ ಹೊಂದಿದ್ದರೆ ನಮ್ಮ ಜೀವನ ಮತ್ತು ವಿಧಿಯ ಶೇ.೧೫-೨೦ ನಮ್ಮ ಕೈಯಲ್ಲಿರುತ್ತದೆ. ನಮ್ಮ ಮಾನಸಿಕಪ್ರಕ್ರಿಯೆಯ ಮೇಲೆ ನಿಯಂತ್ರಣ ಹೊಂದಿದ್ದರೆ ನಮ್ಮ ಜೀವನ ಮತ್ತು ವಿಧಿಯ ಶೇ.೫೦-೬೦ ನಮ್ಮ ಕೈಯಲ್ಲಿರುತ್ತದೆ. ನಮ್ಮ ಜೀವನಶಕ್ತಿಗಳ ಮೇಲೆ ನಿಯಂತ್ರಣ ಹೊಂದಿದ್ದರೆ ನಮ್ಮ ಜೀವನ ಮತ್ತು ವಿಧಿಯ ಶೇ.೧೦೦ ನಮ್ಮ ಕೈಯಲ್ಲಿರುತ್ತದೆ.
ಅಜ್ಞಾನವೂ ಒಂದು ಕರ್ಮವೇ. ಕ್ರಿಯೆಯು ಕರ್ಮವಾಗಿರುವಂತೆ ನಿಷ್ಕಿೃಯತೆಯೂ ಕರ್ಮವೇ. ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ನೈತಿಕತೆಯೊಂದಿಗೆ ಕರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಇದು ‘ಕಾರಣ ಮತ್ತು ಪರಿಣಾಮಕ್ಕೆ’ (ಕಾರ್ಯ-ಕಾರಣ ಸಂಬಂಧ) ಮಾತ್ರವೇ ಸಂಬಂಧಿಸಿದೆ. ಸಂಕಟದ ಮೂಲ ನಿಮ್ಮ ಹಿಂದಿನ ಕ್ರಿಯೆಗಳಲ್ಲ; ಹಿಂದಿನ ಗುರುತು/ಅಚ್ಚುಗಳನ್ನು ನೀವು ಇಂದು ಹೇಗೆ ಪರಿಷ್ಕರಿಸುತ್ತಿದ್ದೀರಿ ಎಂಬುದೇ ಆಗಿದೆ. “ಸಮೂಹಕರ್ಮ” ಎಂಬುದಿದೆ. ನಾವು ಒಬ್ಬ ವ್ಯಕ್ತಿಯಾಗಿ ಕ್ರಿಯೆಗಳನ್ನು ಮಾಡಿದರೂ ಅದರ ಪರಿಣಾಮ ಇತರರ ಮೇಲೂ ಆಗುತ್ತದೆ. ಹಾಗೆಯೇ ಇತರರು ಮಾಡುವ ಕ್ರಿಯೆಗಳ ಪ್ರಭಾವ ನಮ್ಮ ಮೇಲೂ ಆಗುತ್ತದೆ. ಇವೆಲ್ಲಾ ಒಟ್ಟುಸೇರಿ ‘ಸಮೂಹಕರ್ಮ’ವಾಗಿ ಇಡೀ ಸಮುದಾಯದ ಮೇಲೆ ಪ್ರಭಾವ ಬಿರುತ್ತದೆ.
ನಿಮ್ಮ ಜೀವಿತಾವಧಿಯಲ್ಲಿ ನೀವು ಪಡೆಯುತ್ತಿರುವ ಅದೃಷ್ಟ, ಅನುಗ್ರಹದ ಪರಿಣಾಮ/ಪ್ರಭಾವ ನಿಮ್ಮ ಹಿಂದಿನ ಮತ್ತು ಮುಂದಿನ ಪೀಳಿಗೆಯ ಜೀವನದ ಮೇಲೂ ಆಗುತ್ತದೆ. ನೀವು ಒಂದು ಸಿನಿಮಾವನ್ನು ನೋಡಿ ಮನರಂಜನೆ ಪಡೆಯಬಹುದು; ಆದರೆ ಸಿನಿಮಾವನ್ನು ನಿರ್ಮಿಸಿರುವವರ ಪರಿಶ್ರಮ, ಕಷ್ಟ, ಸವಾಲುಗಳ ಕಲ್ಪನೆ ನಿಮಗಿರುವುದಿಲ್ಲ. ಹಾಗೆಯೇ ಜೀವನವೂ. ಜೀವನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಾಚೀನ ಬುದ್ಧಿಮತ್ತೆ ಮತ್ತು ಸಂಪ್ರದಾಯಗಳಿದ್ದವು. ಇಂದು ನಮಗೆ ವಿಚಿತ್ರವೆನಿಸುವ ಕೆಲವು ಅಭ್ಯಾಸಗಳು ಈ ಗ್ರಹಿಕೆಯಿಂದಲೇ ಹೊರಹೊಮ್ಮಿವೆ.
ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಒಂದು ಪರಿಣಾಮವಿದೆ. ಇದರ ಪರಿಣಾಮ ಇಂದು ಅಥವಾ ಮುಂದೆಂದೋ ಗೋಚರಿಸಬಹುದು. ಮುಖ್ಯ ವಿಷಯವೇನೆಂದರೆ; ಅದು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಫಲನೀಡುತ್ತದೆ. ಪೂರಕವಾಗಿದ್ದರೆ ‘ಅದೃಷ್ಟ’; ವಿರುದ್ಧವಾಗಿದ್ದರೆ ‘ವಿಧಿ’ ಎನ್ನುತ್ತೇವೆ! ವ್ಯಕ್ತಿಯೊಬ್ಬನ ಜಾತಕವು ವ್ಯಕ್ತಿಯ ಪ್ರವೃತ್ತಿ, ಕರ್ಮದ ಫಲ, ಅವರ ಜೀವನವು ತೆಗೆದುಕೊಳ್ಳಬಹುದಾದ ಸಂಭವನೀಯ ತಿರುವುಗಳನ್ನು ಸೂಚಿಸುತ್ತದೆ. ಜಾತಕದ ವಿಮರ್ಶೆಯ ಆಧಾರದ ಮೇಲೆ ಒಬ್ಬ ವ್ಯಕ್ತಿ ಅಧ್ಯಾತ್ಮಿಕ ಅಭ್ಯಾಸಕ್ಕೆ ತಿರುಗುತ್ತಾನೆ ಮತ್ತು ಅದು ಪ್ರವೃತ್ತಿಗಳನ್ನು ಮೀರಲು ಅನುವುಮಾಡಿಕೊಡುತ್ತದೆ. ಅಧ್ಯಾತ್ಮಿಕ ಅಭ್ಯಾಸವೆಂದರೆ; ಯಾವಾಗಲೂ ನಿಮ್ಮ ವಿಧಿಯನ್ನು ನಿಮ್ಮ ಕೈಗೆ ತೆಗೆದುಕೊಳ್ಳುವುದು.
ದೇಹ ಕಾಲಾಂತರದಲ್ಲಿ ತುಂಬಿಸಿದ ಆಹಾರದ ರಾಶಿ. ಮನಸ್ಸು ಕಾಲಾಂತರದಲ್ಲಿ ತುಂಬಿಕೊಂಡ ಅಥವಾ ಹೀರಿಕೊಂಡ ಮತ್ತು ಸಂಸ್ಕರಿಸಿದ ಅನಿಸಿಕೆಗಳು ಹಾಗೂ ಆಲೋಚನೆಗಳ ರಾಶಿ. ಎರಡೂ ಗತಕಾಲದ ಸೃಷ್ಟಿಗಳು. ಇವೆರಡೂ ನೆನಪಿನ ಉತ್ಪನ್ನಗಳು. ಆದ್ದರಿಂದ ನೀವು ನಿಮ್ಮ ದೇಹ ಅಥವಾ ಮನಸ್ಸಿನೊಂದಿಗೆ ಗುರುತಿಸಿಕೊಂಡು ಏನು ನಿಮ್ಮ ವ್ಯಕ್ತಿತ್ವವೆಂದು ಭಾವಿಸಿರುತ್ತೀರೋ ಅದು ಕೇವಲ ನೆನಪುಗಳ ಸಂಗ್ರಹಣೆ ಅಷ್ಟೇ. ಇವೆಲ್ಲದರ ಒಟ್ಟು ಸಾರವೇ ‘ಕರ್ಮ.’ ದೇಹ, ಮನಸ್ಸು ಮತ್ತು ಚೈತನ್ಯದ ವ್ಯವಸ್ಥೆಗಳು ಪ್ರತಿಕ್ಷಣವೂ ಮಾಹಿತಿಯಲ್ಲಿ ಮುಳುಗಿರುತ್ತವೆ. ೨೫ ವರ್ಷಗಳ ಹಿಂದೆ ಏನು ನಡೆದಿದೆ ಎಂಬುದನ್ನು ನಿವು ಪ್ರಜ್ಞಾಪೂರ್ವಕವಾಗಿ ಸ್ಮರಿಸಲಾರಿರಿ; ಆದರೆ ಅದು ನಿಮ್ಮ ಮೇಲೆ ಕೆಲಸಮಾಡುತ್ತಿರುತ್ತದೆ. ೨೫೦೦ ವರ್ಷಗಳ ಹಿಂದೆ ಘಟಿಸಿದ ವಿಚಾರಗಳನ್ನು ನೀವು ನೆನಪಿಸಲಾರಿರಿ; ಆದರೆ ಆ ನೆನಪುಗಳು ನಿಮ್ಮ ದೇಹದಲ್ಲಿ ಅಚ್ಚೊತ್ತಲ್ಪಟ್ಟಿರುತ್ತದೆ. ಈ ಭೂಗ್ರಹದ ಮೇಲೆ ನಡೆದಿರುವ ಪ್ರತಿಯೊಂದನ್ನು ನಿಮ್ಮ ದೇಹ ನೆನಪಿಸಿಕೊಳ್ಳುತ್ತದೆ. ನಿಮ್ಮ ಮನಸ್ಸು ಮರೆತಿರಬಹುದು; ಆದರೆ ದೇಹ ಮರೆತಿರುವುದಿಲ್ಲ. ಏಕೆಂದರೆ ದೇಹ ಈ ಭೂಗ್ರಹದ ಒಂದು ಭಾಗವೇ ಆಗಿದೆ. ದೇಹ ಹೊತ್ತೊಯ್ಯುವ ಸ್ಮರಣೆಯ ಪ್ರಮಾಣವು ನಿಮ್ಮ ಮನಸ್ಸು ಸಾಗಿಸುವ ಸಾಮರ್ಥ್ಯಕ್ಕಿಂತ ಶತಕೋಟಿ ಪಟ್ಟು ಹೆಚ್ಚು. ನಿಮ್ಮ ಸುತ್ತಲಿನ ಗಿಡ, ಮರ, ಬಳ್ಳಿ, ಕಲ್ಲು, ವಿವಿಧ ವಸ್ತುಗಳು ವಿವಿಧ ಕಂಪನಗಳನ್ನು ಪ್ರತಿಕ್ಷಣವೂ ನಿರಂತರವಾಗಿ ಹೊರಸೂಸುತ್ತಿರುತ್ತವೆ. ಕರ್ಮದ ಬಂಧನ ಹೆಚ್ಚಾದಂತೆ ನೀವು ಸ್ವಾಭಾವಿಕವಾಗಿ ನಿಮ್ಮ ಸುತ್ತಲೂ ಚಿಕ್ಕ ವಲಯ/ವರ್ತುಲಗಳನ್ನು ರಚಿಸುತ್ತೀರಿ. ೧೮ನೇ ವಯಸ್ಸಿನಲ್ಲಿ ಹೆಚ್ಚಿನವರು ದೊಡ್ಡ ವರ್ತುಲಗಳನ್ನು ರಚಿಸುತ್ತಾರೆ; ೭೦ರ ವಯಸ್ಸಿನಲ್ಲಿ ವರ್ತುಲಗಳು ಚಿಕ್ಕದಾಗುತ್ತವೆ. ಕರ್ಮ ವಲಯಗಳನ್ನು ರಚಿಸುವ ಮೂಲಕ ನೀವು ನಿಮ್ಮ ಜವಾಬ್ದಾರಿಯ ಗಡಿಗಳನ್ನು ನಿರ್ಧರಿಸುತ್ತೀರಿ. ಈ ಗಡಿಗಳನ್ನು ಕುಗ್ಗಿಸುತ್ತಾ ಹೋದಂತೆ ನೀವು ನೇರವಾಗಿ ಖಿನ್ನತೆಯ ಕಡೆಗೆ ಸಾಗುತ್ತೀರಿ! ಆದರೂ ನಿರಂತರವಾಗಿ ನೀವು ನಿಮ್ಮ ಬಂಧವನ್ನು ಸ್ವಾತಂತ್ರ್ಯವೆಂದು ಘೋಷಣೆ ಮಾಡುತ್ತೀರಿ!
ನೀವು ಅನೇಕ ಪ್ರಭಾವಗಳ ಪರಿಣಾಮವಾಗಿ ವ್ಯಕ್ತಿಯಾಗಿಯೂ ಒಂದು ಗುಂಪಾಗುತ್ತೀರಿ. ನೀವು ಗುಂಪು ಅಥವಾ ಪ್ರಭಾವಗಳ ಗೊಂಚಲಾಗಿರುವಾಗ ರೂಪಾಂತರ ಅಸಾಧ್ಯ. ಸಮೂಹವೊಂದು ಒಂದು ನಿರ್ಧಿಷ್ಟ ಅವಧಿಯಲ್ಲಿ ವಿಕಸನಗೊಳ್ಳಬಹುದು; ಆದರೆ ಪರಿವರ್ತನೆ ಸಾಧ್ಯವಿಲ್ಲ. ‘ಒಬ್ಬ ವ್ಯಕ್ತಿ’ ಮಾತ್ರ ಪರಿವರ್ತನೆಗೊಳ್ಳಲು ಸಾಧ್ಯ. ಸಮೂಹವೆಂದಿಗೂ ಪ್ರಬುದ್ಧವಾಗಲು ಸಾಧ್ಯವಿಲ್ಲ. ಜ್ಞಾನೋದಯ ಒಬ್ಬ ವ್ಯಕ್ತಿಗೆ ಮಾತ್ರ ಸಂಭವಿಸುತ್ತದೆ.
ರಕ್ತಸಂಬಂಧದ ಋಣಾನುಬಂಧ ತಾಯಿ-ಮಗುವಿನ ಮಧ್ಯೆ ಸಂಭವಿಸುತ್ತದೆ. ಗರ್ಭವತಿ ತಾಯಿಯ ಬಹುತೇಕ ನೆನಪಿನ ಸಂಗ್ರಹ (ದೈಹಿಕ ಮತ್ತು ಅನುವಂಶಿಕ) ಹುಟ್ಟಲಿರುವ ಮಗುವಿಗೆ ಯಥಾರೀತಿಯಲ್ಲಿ ವರ್ಗಾವಣೆಯಾಗುತ್ತದೆ! ಗರ್ಭಾವಸ್ಥೆಯ ಅವಧಿಯಲ್ಲಿ ತಾಯಿಯಾಗುವವಳು ತನ್ನ ಪೋಷಕರನ್ನು ಒಳಗೊಂಡಂತೆ ತನಗೆ ಅತಿಹತ್ತಿರದ ಎಲ್ಲರ ಬಗೆಗಿನ ಭಾವನಾತ್ಮಕ ಸಂಬಂಧವನ್ನು ಕಡಿಮೆಗೊಳಿಸಿ, ಮುಂದೆ ಬರಲಿರುವ ಮಗುವಿನ ನಿರೀಕ್ಷೆ ಮತ್ತು ವ್ಯವಸ್ಥೆ (ಪೂರ್ವತಯಾರಿ)ಯಲ್ಲಿ ವ್ಯಸ್ತಳಾಗುವುದು ಪ್ರಕೃತಿಯ ಯೋಜನೆ. ಒಂದುವೇಳೆ ಇದು ಸಾಧ್ಯವಾಗದಿದ್ದರೆ ಮಗುವಿನ ಹುಟ್ಟು, ಬೆಳವಣಿಗೆ, ಬದುಕು ಸದಾ ಸಂಘರ್ಷಮಯವಾಗಿರುತ್ತದೆ!