ಹುಬ್ಬಳ್ಳಿ: ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಲಿದ್ದು ನಾವು ನೀಡುವ ಭರವಸೆ ಪ್ರಾಮಾಣಿಕವಾಗಿ ಈಡೇರಿಸುತ್ತೇವೆ ಎಂದು ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಹುಬ್ಬಳ್ಳಿಯಲ್ಲಿ ಕುಂದಗೋಳ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಅವರ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಂತೆ ನಾವು ಗ್ಯಾರಂಟಿ ಕಾರ್ಡ್ ನೀಡುವುದಿಲ್ಲ. ವಾರೆಂಟಿ ಮುಗಿದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ನ್ನು ಜನ ನಂಬುವುದಿಲ್ಲ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಭ್ರಮೆ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಸಿದ್ದರಾಮಯ್ಯ ಇಡೀ ಲಿಂಗಾಯತರೇ ಭ್ರಷ್ಟರು ಅಂತ ಹೇಳಿಕೆ ವಿಚಾರ. ಚುನಾವಣಾ ಸಮಯದಲ್ಲಿ ಒಂದು ಸಮುದಾಯದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ. ಹಾಗಿದ್ದರೇ ಸಿದ್ಷಾರಮಯ್ಯ ಅವರೇ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್. ಪಟೇಲ್ ಭ್ರಷ್ಟರಾ? ಎಂದು ಪ್ರಶ್ನೆಸಿದರು.
ನಮಗೆ ಯಾವುದೇ ಸಮೀಕ್ಷೆಗಳ ಬಗ್ಗೆ ವಿಶ್ವಾಸವಿಲ್ಲ. ದೇಶದಲ್ಲಿ ಶೇ. ೯೯ ರಷ್ಟು ಸಮೀಕ್ಷೆ ಸುಳ್ಳಾಗಿವೆ. ನಾನು ಸಿಎಂ ಆಗೋದಿಲ್ಲ, ಮಂತ್ರಿ ಆಗೋದಿಲ್ಲ. ನಾನು ಸಿಎಂ ರೇಸ್ ನಲ್ಲಿ ಇಲ್ಲ ಎಂದರು. ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯಲ್ಲಿ ಏನೇ ನಡೆದರೂ ಅವರಿಗೆ ಏಕೆ ಬೇಕು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ಮೊದಲು ನೋಡಿಕೊಳ್ಳಲಿ. ಅದನ್ನು ಬಿಟ್ಟು ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ್ ಅವರ ಬಗ್ಗೆ ಅಪಪ್ರಚಾರ ಸರಿಯಲ್ಲ. ಕುಮಾರಸ್ವಾಮಿ ಲಿಂಗಾಯತರು, ದಲಿತರು, ಕುರುಬರು ಸೇರಿ ಯಾರಿಗೂ ಗೌರವ ಕೊಡುವುದಿಲ್ಲ. ತಮ್ಮ ಕುಟುಂಬದ ಚಿಂತೆ ಮಾಡುತ್ತಾರೆ. ಹೀಗಾಗಿ ಕುಮಾರಸ್ವಾಮಿ ಅವರು ಅಪ್ರಸ್ತುತ ಎಂದರು. ಕುಮಾರಸ್ವಾಮಿ ಯಾವುದೇ ಲಿಂಗಾಯತರ ನಾಯಕರನ್ನು ಬೆಳಸಿಲ್ಲ ಎಂಬುದನ್ನು ನಾವುಗಳು ಕಣ್ಣಾರೆ ನೋಡಿದ್ದೇವೆ ಎಂದರು.