ದೇಶಕ್ಕೆ ‘ಸಂಯುಕ್ತ ಕರ್ನಾಟಕ’ ಕೊಡುಗೆ ದೊಡ್ಡದು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘನೆ

ಕಾಗೇರಿ
Advertisement

ಹುಬ್ಬಳ್ಳಿ : ಸಮಾಜಕ್ಕೆ, ದೇಶಕ್ಕೆ ಸಂಯುಕ್ತ ಕರ್ನಾಟಕ ಪತ್ರಿಕೆ ಕೊಟ್ಟಿರುವ ಕೊಡುಗೆ ಬಹಳ ದೊಡ್ಡದಿದೆ. ನಾವೆಲ್ಲ ನೆನೆಸಿಕೊಳ್ಳಬೇಕು ಎಂದು ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ ಕೆಎಲ್ಇ ತಾಂತ್ರಿಕ ವಿವಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ಧ ಚುನಾವಣಾ ಸುಧಾರಣಾ ಕ್ರಮ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ದೇಶದ ಇತಿಹಾಸದ ಪುಟಗಳನ್ನು ನೋಡಿ ಪತ್ರಿಕಾ ರಂಗ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಅದರಲ್ಲೂ ನಮ್ಮ ಸಂಯುಕ್ತ ಕರ್ನಾಟಕ ಪತ್ರಿಕೆಯ ಕೊಡುಗೆ ಅನನ್ಯವಾದುದು. ನಾನು ಹುಬ್ಬಳ್ಳಿ, ಧಾರವಾಡದಲ್ಲಿಯೇ ವಿದ್ಯಾರ್ಥಿ ಜೀವನ ಕಳೆದಂತಹ ವ್ಯಕ್ತಿ. ಸಂಯುಕ್ತ ಕರ್ನಾಟಕ ಕಾರ್ಯಗಳ ಬಗ್ಗೆ ಗೊತ್ತು, ಪತ್ರಿಕಾ ಕ್ಷೇತ್ರದ ಇತಿಹಾಸ ಅಧ್ಯಯನ ಮಾಡಿ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಲೋಪದೋಷಗಳು ಎದ್ದು ಕಾಣುತ್ತಿರುವಂತೆಯೇ ಪತ್ರಿಕಾ ರಂಗದಲ್ಲೂ ಲೋಪದೋಷಗಳು ಎದ್ದು ಕಾಣುತ್ತಿವೆ. ಅದೂ ಕೂಡಾ ವ್ಯವಸ್ಥೆಯ ಭಾಗವೇ ಆಗಿದೆ. ಇದನ್ನು ಸರಿದಾರಿಗೆ ತರುವ ಜವಾಬ್ದಾರಿ ಒಟ್ಟು ಸಮಾಜದ ಮೇಲಿದೆ. ಪ್ರತಿಯೊಬ್ಬರು ತಮ್ಮ ಹೊಣೆಗಾರಿಕೆ ಅರಿತು ನಡೆಯಬೇಕು. ಅಂದಾಗ ಎಲ್ಲವೂ ಸರಿಯಾಗುತ್ತದೆ ಎಂದು ಸಲಹೆ ನೀಡಿದರು.