ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ

Advertisement

ಕುಷ್ಟಗಿ: ಬಿಜೆಪಿಯವರಿಗೆ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಬಡವರು, ದೀನ-ದಲಿತರ ಬಗ್ಗೆ ಕಾಳಜಿ ಇಲ್ಲ. ದೇವರು ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯಕೋಸ್ಕರ ಮತ್ತು ವೋಟ್ ಬ್ಯಾಂಕ್‌ಗಾಗಿ ಸಂವಿಧಾನಿಕವಾಗಿ ನಡೆದುಕೊಳ್ಳುವಂತಹ ಯಾವುದೇ ವಿಚಾರಗಳು ಬಿಜೆಪಿಯವರಿಗೆ ಇಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಚರಿತ್ರೆ ನೋಡಿದಾಗ ಜಾತಿ ವ್ಯವಸ್ಥೆ ಒಪ್ಪಿಕೊಂಡು ಆಚರಣೆ ಮಾಡುತ್ತಿದ್ದೇವೆ, ಮುಂದುವರೆದ ಸಮಾಜಗಳು ಜಾತಿಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ರಾಜಕೀಯ ಪ್ರಭಾವ ಬೀರುತ್ತಿವೆ. ಕೆಳಹಂತದ ಜಾತಿಗಳು ತಮ್ಮ ಹಕ್ಕುಗಳು, ಸಂವಿಧಾನದ ಆಶಯಗಳು ಈಡೇರಬೇಕೆಂಬ ಹೋರಾಟ ಮಾಡುತ್ತಿದ್ದಾರೆ ಎಂದರು.
ವೈದಿಕ ವ್ಯವಸ್ಥೆ ಇನ್ನೂ ಶೂದ್ರ ಸಮುದಾಯವನ್ನು ಎರಡನೇ ದರ್ಜೆಯ ಸಮುದಾಯವನ್ನಾಗಿ ಕಾಣುತ್ತಿರುವ ಪ್ರವೃತ್ತಿ ಇದೆ. ವೈದಿಕ ವ್ಯವಸ್ಥೆಯ ವಿರುದ್ಧವೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ೧೨ನೇ ಶತಮಾನದ ಬಸವಣ್ಣನವರು ಹೋರಾಟ ಮಾಡಿದ್ದರು. ಅಂಬೇಡ್ಕರ್ ಮತ್ತು ಕನಕದಾಸರನ್ನು ದೇವಸ್ಥಾನಕ್ಕೆ ಪ್ರವೇಶ ಮಾಡಲೂ ಬಿಡಲಿಲ್ಲ ಎಂದರು.
ಶೂದ್ರರು ವೈದಿಕ ವ್ಯವಸ್ಥೆ ತಿಳಿದುಕೊಳ್ಳಬೇಕು. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ಒದಗಿಸಿಕೊಟ್ಟಿದ್ದರೂ, ಜಾತಿ ಪದ್ಧತಿ ಅನುಸರಿಸುತ್ತಿರುವುದು ಸರಿಯಲ್ಲ. ಇನ್ನೂ ಜಾತಿ ಪದ್ಧತಿ ಜೀವಂತವಾಗಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರಿಗೆ ಸಂವಿಧಾನ ಆಶಯ ಉಲ್ಲಂಘನೆ ಆಗಿರುವ ಬಗ್ಗೆ ವರದಿ ತರಿಸಿಕೊಳ್ಳುವಂತೆ ಹೇಳಿದ್ದೇನೆ. ಸಂವಿಧಾನ ಆಶಯಕ್ಕೆ ವಿರುದ್ಧ ಹಾಗೂ ಕಾನೂನಿಗೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ ಅದು ತಪ್ಪೇ ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದವರು ಭಾರತದ ಪ್ರಜೆಗಳು, ಅವರೂ ಕೂಡ ಭಾರತ ದೇಶದವರಲ್ಲವೇ?. ಮುಸ್ಲಿಮರನ್ನು ಕೇವಲ ಓಲೈಕೆಗೆ ಹೇಗೆ ಬಳಸಿಕೊಳ್ಳಲು ಬರುತ್ತದೆ ಹೇಳಿ ನೋಡೋಣ?. ಎಲ್ಲರಿಗೂ ಸಮಾನ ಹಕ್ಕು ಇದೆ. ರಾಜ್ಯ ಸರ್ಕಾರ ಸಂವಿಧಾನದ ಜಾಗೃತಿ ಸಮಾವೇಶ ರಾಜ್ಯದ ಪ್ರತಿ ಹಳ್ಳಿಗಳಿಗೆ ಕಳಿಸಿಕೊಡುತ್ತಿದ್ದೇವೆ ಎಂದರು.
ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮುತ್ಸದ್ಧಿ ರಾಜಕಾರಣಿ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಈಗಾಗಲೇ ವೀಕ್ಷಕರು ಕ್ಷೇತ್ರಕ್ಕೆ ಭೇಟಿ ಕೊಟ್ಟು ಎಲ್ಲರ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ಮೂರು ಜನ ಆಕಾಂಕ್ಷಿಗಳಿದ್ದು, ಗೆಲ್ಲುವ ಕುದುರೆ ಬಗ್ಗೆ ಚರ್ಚೆ ನಡೆಸಲಾಗಿದೆ. ನನ್ನ ವೈಯಕ್ತಿಕ ಅಭಿಪ್ರಾಯವನ್ನು ಸಹ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ಮಹದೇವಪ್ಪ ತಿಳಿಸಿದರು.